ADVERTISEMENT

ಬೇಡಿಕೆ ಈಡೇರಿಕೆಗಾಗಿ ಕಟ್ಟಡ ಕಾರ್ಮಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 6:30 IST
Last Updated 7 ನವೆಂಬರ್ 2012, 6:30 IST

ಹೊನ್ನಾವರ: ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಶನ್‌ನ ಹೊನ್ನಾವರ ಘಟಕದ ವತಿಯಿಂದ  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಅರ್ಪಿಸಿದರು. ಮಹತ್ವದ ಹುದ್ದೆಗಳು ಖಾಲಿಯಾಗಿರುವುದರಿಂದ ಕಾರ್ಮಿಕ ಕಲ್ಯಾಣ ಮಂಡಳಿ ನಿಷ್ಕ್ರಿಯವಾಗಿದ್ದು ಕಟ್ಟಡ ಕಾರ್ಮಿಕರ ಅರ್ಜಿಗಳ  ತುರ್ತು ವಿಲೇವಾರಿ ಮಾಡಿ ಅವರಿಗೆ ಅಗತ್ಯ ಸೌಲಭ್ಯ ನೀಡಲು ಮಂಡಳಿಗೆ ಒಬ್ಬ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಕೂಡಲೆ ನೇಮಕ ಮಾಡಬೇಕು.

1996ರ ಕಟ್ಟಡ ಕಾರ್ಮಿಕರ ಕೇಂದ್ರ ಶಾಸನವನ್ನು ಎಲ್ಲ ರಾಜ್ಯಗಳಲ್ಲೂ ಜಾರಿಗೊಳಿಸಬೇಕು, ಅಗತ್ಯ ವಸ್ತುಗಳ ಹಾಗೂ ಕಟ್ಟಡ ಸಾಮಗ್ರಿಗಳ ಬೆಲೆ ಇಳಿಸಬೇಕು, ಕಟ್ಟಡ ಕಾರ್ಮಿಕರನ್ನು ಬಡತನ ರೇಖೆಯ ಕೆಳಗಿನ ಪಟ್ಟಿಗೆ ಸೇರ್ಪಡೆ ಮಾಡಬೇಕು, ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು, ವಾಸದ ಮನೆ ಕಾರ್ಮಿಕರ ಮೂಲ ಹಕ್ಕಾಗಬೇಕು, ಕಟ್ಟಡ ಕಾರ್ಮಿಕರ ಕನಿಷ್ಠ ವೇತನವನ್ನು 10000 ರೂ.ಗೆ ನಿಗದಿಪಡಿಸಬೇಕು,ಕಳೆದ ಎ.3ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ಮಂಡಳಿಯ ಸಭೆಯ ಎಲ್ಲ ತೀರ್ಮಾನಗಳನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂಬ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಸಚಿವರ ಮುಂದಿಡಲಾಗಿದೆ.

ಫೆಡರೇಶನ್‌ನ ಜಿಲ್ಲಾ ಘಟಕದ ಅಧ್ಯಕ್ಷ ತಿಲಕ ಗೌಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಕೊಪ್ಪಿಕರ, ಜಿಲ್ಲಾ ಖಜಾಂಚಿ ಮೀನಾ ಗೌಡ, ಮಂಜುನಾಥ ಗೌಡ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಕುಮಟಾದಲ್ಲಿ ಪ್ರತಿಭಟನೆ
ರಾಜ್ಯ ಕಟ್ಟಡ ಮತ್ತು ಇತರೆ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲ್ಲೂಕು ಘಟಕ ಮಂಗಳವಾರ ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಿತು.

ಕಳೆದ ಮೂರು ತಿಂಗಳಿಂದ  ಕಲ್ಯಾಣ  ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ, ಆಯುಕ್ತರ ಹುದ್ದೆ ಹಾಗೂ ಉದ್ಯೋಗ ಮತ್ತು ತರಬೇತಿ ನಿರ್ದೇಶಕರ ಹುದ್ದೆಗಳು ಖಾಲಿ ಇವೆ. ಆದರೆ ಕಾರ್ಮಿಕರ ಕಲ್ಯಾಣ ಮಂಡಳಿಯ ಪದನಿಮಿತ್ತ ಕಾರ್ಯನಿರ್ವಹಣಾಧಿಕಾರಿ ಎಂಬ ಈಗಿನ ಹುದ್ದೆ ಅಗತ್ಯವಿರುವುದಿಲ್ಲ.

ಮಂಡಳಿಯ ಸಭೆಯಲ್ಲಿ ಹಲವು ಸೌಲಭ್ಯಗಳನ್ನು ಪರಿಷ್ಕರಿಸಲಾಗಿದ್ದರೂ ಆ ಬಗ್ಗೆ ಸರಕಾರದ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ. ರಾಜ್ಯದಲ್ಲಿ 15 ಲಕ್ಷಕ್ಕಿಂತ ಹೆಚ್ಚು  ವಿವಿಧ ಕಾರ್ಮಿಕರಿದ್ದರೂ 2ಲಕ್ಷಕ್ಕಿಂತ ಕಡಿಮೆ ಕಾರ್ಮಿಕರು ಮಾತ್ರ ನೋಂದಾಯಿಸಲ್ಪಟ್ಟಿದ್ದಾರೆ. ಮಂಡಳಿಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಮಂಡಳಿಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರನ್ನು ಸಕಾಲದಲ್ಲಿ ನೇಮಕ ಮಾಡುವುದು ಅನಿವಾರ್ಯವಾಗಿದೆ.

ನೋಂದಾಯಿತ ಎಲ್ಲ ಕಟ್ಟಡ ಕಾರ್ಮಿಕರಿಗೆ 30 ಸಾವಿರ ರೂಪಾಯಿ ತನಕ ಚಿಕಿತ್ಸೆ ಸೌಲಭ್ಯ ನೀಡಬೇಕು. ಮದುವೆ ಸಹಾಯಧನ ರೂ 10 ಸಾವಿರದಿಂದ ರೂ 50 ಸಾವಿರಕ್ಕೆ ಹೆಚ್ಚಿಸಬೇಕು. ಕಾರ್ಮಿಕರಿಗೆ ಮನೆ ಕಟ್ಟುವ ಸಾಲ ರೂ 50 ಸಾವಿರದಿಂದ ರೂ 2 ಲಕ್ಷಕ್ಕೆ ಹೆಚ್ಚಿಸಬೇಕು. ಮಹಿಳಾ ಪಲಾನುಭವಿಗಳ ಹೆರಿಗೆ ಭತ್ಯೆ  ರೂ  6 ಸಾವಿರದಿಂದ ರೂ 15 ಸಾವಿರಕ್ಕೇರಿಸಬೇಕು. ಅಂಗವಿಕಲರ ಪಿಂಚಣಿ ರೂ 300 ರಿಂದ ರೂ 1 ಸಾವಿರಕ್ಕೇರಿಸುವುದು ಸೇರಿದಂತೆ ಸುಮಾರು 15 ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಫೆಡರೇಷನ್‌ನ ರಾಜ್ಯ ಸಮಿತಿ ಸದಸ್ಯ ಶಾಂತಾರಾಂ ನಾಯ್ಕ, ತಾಲ್ಲೂಕು ಸಮಿತಿಯ ಸಂಚಾಲಕರುಗಳಾದ  ಸಾಲ್ವೋದರ ಫರ್ನಾಂಡಿಸ್, ಗಂಗಾಧರ ಅಂಬಿಗ ಹಗೂ ಸಿಐಟಿಯು ಕಾರ್ಯದರ್ಶಿ ಗಂಗಾ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.