ADVERTISEMENT

ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 11:20 IST
Last Updated 2 ಫೆಬ್ರುವರಿ 2011, 11:20 IST

ಹಳಿಯಾಳ: ದಲಿತ ಸಂಘರ್ಷ ಸಮಿತಿ(ಸಂಯೋಜಕ) ಹಳಿಯಾಳ ಮತ್ತು ದಾಂಡೇಲಿ ಶಾಖೆಗಳ ವತಿಯಿಂದ ಭೂಮಿ, ವಸತಿ, ನಾಗರಿಕ ಸೌಲಭ್ಯಗಳು, ಪಡಿತರ ಚೀಟಿ ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ  ಧರಣಿ ನಡೆಸಲಾಯಿತು.ಸೋಮವಾರ ಸ್ಥಳೀಯ ತಹಸೀಲ್ದಾರ ಕಚೇರಿ ಎದುರುಗಡೆ ನೂರಾರು ಸಂಖ್ಯೆಯಲ್ಲಿ  ದಲಿತ ಸಂಘರ್ಷ ಸಮಿತಿಯ ಸದಸ್ಯರು ಧರಣಿ ನಡೆಸಿ ನಂತರ ತಹಸೀಲ್ದಾರ ಎ.ಆರ್.ದೇಸಾಯಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ದಲಿತರು, ಬಡವರು, ಕೂಲಿ ಕಾರ್ಮಿಕರು, ಕೃಷಿಕರು ತಮ್ಮ ಒಪ್ಪೊತ್ತಿನ ಕೂಳಿಗಾಗಿ ಪರಿತಪಿಸುವುದು ಮಾತ್ರ ತಪ್ಪಿಲ್ಲ.ಅಧಿಕಾರಕ್ಕೆ ಬರುವ ಮುನ್ನ ದಲಿತರ ಉದ್ಧಾರದ ಬಗ್ಗೆ, ಶೋಷಣೆ ಬಗ್ಗೆ ಮತ್ತು ಸಂಕಷ್ಟಗಳ ಬಗ್ಗೆ ದಿನ ನಿತ್ಯ ಬೀಗುವ ರಾಜಕಾರಣಿಗಳು ಗೆದ್ದ ನಂತರ ಆ ಬಗ್ಗೆ ಚಕಾರ ಎತ್ತುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು ಸರಕಾರ ನಿಯಂತ್ರಿಸಲಾಗದೆ ಜನಸಾಮಾನ್ಯರು ಪರದಾಡಬೇಕಾಗಿದೆ. ರಾಜಕಾರಣಿಗಳು, ಅಧಿಕಾರಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಲಿತರಿಗಾಗಿ ಇರುವ ಯೋಜನೆಗಳು ಜಾರಿಗೆ ತರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿ ದಲಿತ ಕುಟುಂಬಗಳಿಗೆ ತಲಾ ನಾಲ್ಕು ಎಕರೆ ಭೂಮಿ ಮಂಜೂರಾತಿ ಮಾಡಿ ಪಟ್ಟಾ ವಿರತಣೆ, ಆಶ್ರಯ, ಇಂದಿರಾವಾಸ, ಅಂಬೇಡ್ಕರ್, ಮನೆಗಳ ಮಂಜೂರಿ, ಪಡಿತರ ಕಾರ್ಡ್‌ಗಳನ್ನು ವಿತರಿಸಿ, ಪ್ರತಿ ಕಾರ್ಡ್‌ಗೆ 30 ಕೆ.ಜಿ.ಅಕ್ಕಿ ವಿತರಿಸುವುದು, ದಾಂಡೇಲಿ ನಗರಸಭೆಯ ಆಧಿನದಲ್ಲಿ ಇದ್ದ 20 ಎಕರೆ ಜಮೀನಿನಲ್ಲಿ ಆಶ್ರಯ ಇಲ್ಲದ ಬಾಡಿಗೆ ಮನೆಗಳಲ್ಲಿ ವಾಸ ಮಾಡುವ ಬಡವರನ್ನು ಗುರುತಿಸಿ ಅಂತಹವರಿಗೆ ನಿವೇಶನ ನೀಡುವುದು, ಹಳಿಯಾಳ ಮತ್ತು ದಾಂಡೇಲಿ ಪಟ್ಟಣಗಳಲ್ಲಿ ಡಾ. ಬಾಬು ಜಗಜೀವನರಾಮ ಸಭಾಭವನ ನಿರ್ಮಿಸಲು 10 ಗುಂಟೆ ನಿವೇಶನ ಮಂಜೂರಿ ಮಾಡಬೇಕು,

ದಲಿತರ ಶೇ. 22.5ರ ಅನುದಾನ ಗ್ರಾ.ಪಂ. ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆಗಳಲ್ಲಿ ಹಗಲು ದರೋಡೆ ಆಗುತ್ತಿದ್ದು, ಶೀಘ್ರದಲ್ಲಿ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು,ಹಳಿಯಾಳ ಮತ್ತು ದಾಂಡೇಲಿ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುತ್ತಾರೆ.

ಶಾಸಕರ ಭರವಸೆ: ಶಾಸಕ ಸುನೀಲ ಹೆಗಡೆ ಧರಣಿ ನಿರತದ ಬಳಿ ತೆರಳಿ ದಲಿತರ ಬೇಡಿಕೆಗಳನ್ನು ಆದಷ್ಟು ತಾವು ಬಗೆ ಹರಿಸಲು ಪ್ರಯತ್ನಿಸುತ್ತೇವೆ ಎಂದು ಧರಣಿ ನಿರತರಗೆ ಭರವಸೆ ನೀಡಿದರು. ಪ್ರತಿಭಟನಾ ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ(ಸಂಯೋಜಕ)ದ  ಹಳಿಯಾಳ ದಾಂಡೇಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.