ADVERTISEMENT

`ಮಕ್ಕಳ ಪ್ರಗತಿಗೆ ಶಿಕ್ಷಣ ಅಗತ್ಯ'

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:44 IST
Last Updated 13 ಜೂನ್ 2013, 8:44 IST

ಸಿದ್ದಾಪುರ: `ಮಕ್ಕಳ ಪ್ರಗತಿಗೆ ಶಿಕ್ಷಣ ಅಗತ್ಯ' ಎಂದು ಸಿವಿಲ್ ಮತ್ತು ನ್ಯಾಯಾಧೀಶೆ ವಿಮಲಾ ಆರ್.ನಂದಗಾಂವ ಹೇಳಿದರು.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಅಂಗವಾಗಿ ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮಕ್ಕಳು ಗಿಡದಂತೆ. ಗಿಡಗಳಿಗೆ ಒಳ್ಳೆಯ ಪೋಷಣೆ ನೀಡಿದರೆ ಅವುಗಳು ಉತ್ತಮ ಫಲ ನೀಡುವಂತೆ ಮಕ್ಕಳಿಗೆ  ಒಳ್ಳೆಯ ಶಿಕ್ಷಣ ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ' ಎಂದರು.

`ಮಕ್ಕಳು  ತಮಗೆ ಸಿಕ್ಕುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಲ್ಲ ಮಕ್ಕಳಿಗೂ ಎಲ್ಲ ಸೌಲಭ್ಯಗಳು ದೊರೆಯುವುದಿಲ್ಲ. ಮೈಮೇಲೆ ಸರಿಯಾಗಿ ಬಟ್ಟೆ ಕೂಡ ಇಲ್ಲದೇ ಭಿಕ್ಷೆ ಬೇಡುವ ಮಕ್ಕಳನ್ನು ನಾವು ನೋಡುತ್ತೇವೆ. ಈ ರೀತಿಯ ಪರಿಸ್ಥಿತಿ ದೂರವಾಗಬೇಕು ಎಂಬ ದೃಷ್ಟಿಯಿಂದಲೇ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ' ಎಂದರು.

`ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಮಹಾಪುರುಷರ ಜೀವನ ಚರಿತ್ರೆಯನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು' ಎಂದರು.

ಬಿಇಒ ಬಿ.ವಿ.ನಾಯ್ಕ, ತಾ.ಪಂ.ಯೋಜನಾಧಿಕಾರಿ ವಿ.ಎಂ.ಹೆಗಡೆ ಉಪಸ್ಥಿತರಿದ್ದರು. ತಹಶೀಲ್ದಾರ್ ವಿ.ಕೆ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸ: ವಕೀಲ ಎಸ್.ಜಿ.ಹೆಗಡೆ ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾನೂನು ಕುರಿತು ಉಪನ್ಯಾಸ ನೀಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ.ಹೆಗಡೆ ಸ್ವಾಗತಿಸಿದರು.ಎನ್.ಆರ್.ಹೆಗಡೆಕರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.