ADVERTISEMENT

ಮಳೆ: ಜನ ಜೀವನಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 7:00 IST
Last Updated 1 ಜೂನ್ 2011, 7:00 IST
ಮಳೆ: ಜನ ಜೀವನಕ್ಕೆ ಅಡ್ಡಿ
ಮಳೆ: ಜನ ಜೀವನಕ್ಕೆ ಅಡ್ಡಿ   

ಕುಮಟಾ:  ಮಂಗಳವಾರ ಇಲ್ಲಿ ಭಾರಿ ಮಳೆ ಸುರಿದದ್ದರಿಂದ ವಾಹನ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಯಿತು.

ವರ್ಷದ ಅಧಿಕೃತ ಮಳೆ ಜೂನ್ 7 ರಿಂದ ಆರಂಭವಾಗುತ್ತದೆ ಎನ್ನುವುದು  ಜನರ ನಂಬಿಕೆಯಾಗಿತ್ತು. ಆದರೆ ಇನ್ನೆರಡು ದಿನದಲ್ಲಿ  ಮಳೆಯಾಗುತ್ತದೆ ಎನ್ನುವ ಹವಾಮಾನ ಇಲಾಖೆ ವರದಿಯನ್ನೂ ಮೀರಿ ಎರಡು ದಿನ ಮೊದಲೇ ಆರಂಭವಾದ ಮಳೆಯಲ್ಲಿ ಕೊಡೆ ಇಲ್ಲದವರು ಮಂಗಳವಾರ ಒದ್ದೆಯಾಗಬೇಕಾಯಿತು.

ಬೆಳಿಗ್ಗೆ ಶಾಲೆ- ಕಾಲೇಜು, ಕಚೇರಿಗೆ ಹೋಗುವವರು ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಪಟ್ಟಣದ ಗಟಾರವೆಲ್ಲ ತುಂಬಿ ಒಳಗಿದ್ದ ಕಸ, ಪ್ಲಾಸ್ಟಿಕ್ ಚೀಲಗಳು ರಸ್ತೆಯ ಮೇಲೆ ರಾಶಿ-ರಾಶಿಯಾಗಿ ಬಿದ್ದು ಓಡಾಟಕ್ಕೆ ತೊಂದರೆಯಾಯಿತು.

ಔಷಧ ಸಿಂಪರಣೆಗೆ ಅಡ್ಡಿ
ಕಳೆದ ವರ್ಷದಿಂದ ಮಳೆ ಬೀಳುವ ಮೊದಲು ಅಡಿಕೆ ಗೊನೆಗಳಿಗೆ `ಬಯೋಫೈಟ್~ ಎಂಬ ಕೊಳೆನಾಶಕ ಔಷಧಿ ಹೊಡೆಯುತ್ತಿದ್ದವರಿಗೆ ಮಂಗಳವಾರ ಸುರಿದ ಮಳೆ ಅಡ್ಡಿಯಾಯಿತು.

ಮಳೆ ಬಿದ್ದ ನಂತರ ಹೊಡೆಯುವ  ಮೈಲು ತುತ್ತೆ ಔಷಧಿ ಸಿಂಪರಣೆಗಿಂತ `ಬಯೋಫೈಟ್~ ಎಂಬ ಹೊಸ ಔಷಧಿ ಅಡಿಕೆ ಕೊಳೆ ರೋಗ ನಿವಾರಣೆಗೆ ಹೆಚ್ಚು ಪರಿಣಾಮಕಾರಿ ಎಂದು ನಂಬಿರುವ ರೈತರು ಮೇ ಮೊದಲ ವಾರದಿಂದಲೇ ಅದರ ಸಿಂಪರಣೆ ಆರಂಭಿಸಿದ್ದರು.

ಮಳೆಗೆ ಮೊದಲು `ಬಯೋ ಫೈಟ್~, ಮಳೆಯೇನಾದರೂ ಜಾಸ್ತಿಯಾದರೆ  ಮೈಲು ತುತ್ತೆ ಮದ್ದು  ಸಿಂಪರಣೆಗೆ ರೈತರು  ಸಿದ್ಧರಾಗಿದ್ದಾರೆ. ಮಳೆಯ ಜಾರಿಕೆಯಲ್ಲಿ ಅಡಿಕೆ ಮರ ಹತ್ತಿ ಕೊಳೆ ಮದ್ದು ಹೊಡೆಯುವುದಕ್ಕಿಂತ   ಮಳೆಗೆ ಮೊದಲೇ `ಬಯೋಫೈಟ್~ ಸಿಂಪರಣೆ ಕೆಲಸ ಕೂಲಿಗಳಿಗೂ ಹೆಚ್ಚು ಅನುಕೂಲ. ಮಳೆಗಾಲದ ಉರುವಲಿಗೆ ಕಟ್ಟಿಗೆ ಸಂಗ್ರಹ, ಮನೆ, ಕೊಟ್ಟಿಗೆಗಳ ಮಾಡು ದುರಸ್ತಿ ಕೆಲಸ ಇನ್ನು ಬಾಕಿ ಇರುವಾಗಲೇ ಮಳೆ ಬಂದದ್ದು ಹೆಚ್ಚಿನವರಿಗೆ ತೊಂದರೆಯಾಗಿದೆ. ಪಟ್ಟಣದಲ್ಲಿ ಮಂಗಳವಾರ 5.5 ಮಿಲಿ ಮೀಟರ್ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.