ADVERTISEMENT

ಮಹಾಂತೇಶ, ಪಟಗಾರಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 7:14 IST
Last Updated 5 ಸೆಪ್ಟೆಂಬರ್ 2013, 7:14 IST

ಮುಂಡಗೋಡ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಮಹಾಂತೇಶ ಬಸಪ್ಪ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ.

ಕಳೆದ 11ವರ್ಷಗಳಿಂದ ಗ್ರಾಮೀಣ ಭಾಗದ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾಂತೇಶ ಹುಬ್ಬಳ್ಳಿ ಶಿಕ್ಷಕರಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸತತ 5ವರ್ಷ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರದ್ದಾಗಿದೆ. ಚಿತ್ರಕಲೆಯಲ್ಲಿ ಅಷ್ಟೇ ಅಲ್ಲದೇ ಆಶುಭಾಷಣ ಸ್ಪರ್ಧೆಯಲ್ಲಿಯೂ ಸತತ ಎರಡು ವರ್ಷ ಪ್ರಥಮ ಸ್ಥಾನ ಗಳಿಸಿದ್ದಾರೆ.

2012ರಲ್ಲಿ ರೋಟರಿ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ್ದಾರೆ. 2009ರಲ್ಲಿ ಮೈಸೂರಿನಲ್ಲಿ ಜಿಲ್ಲಾ ಉತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ, 2013ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಸನ್ಮಾನ ಪಡೆದಿದ್ದಾರೆ.

ಪಟಗಾರಗೆ ಪ್ರಶಸ್ತಿ
ಪ್ರಸಕ್ತ ಸಾಲಿನ ಪ್ರಾಥಮಿಕ ವಿಭಾಗದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ದಾಮೋದರ ಸೂರಪ್ಪ ಪಟಗಾರ ಅವರಿಗೆ ಲಭಿಸಿದೆ.

ಕಳೆದ 35ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಕಳೆದ 18ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವೆಯ ಹೆಚ್ಚಿನ ಅವಧಿಯನ್ನು ಗ್ರಾಮೀಣ ಭಾಗದಲ್ಲಿಯೇ ಸಲ್ಲಿಸಿ ಅನೇಕ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಿ ರಾಜ್ಯಮಟ್ಟದವರೆಗೂ ಕಳಿಸಿದ ಕೀರ್ತಿ ಇವರದ್ದಾಗಿದೆ.

ತಾಲ್ಲೂಕಿನಲ್ಲಿ ಖೋಖೋ ಆಟಕ್ಕೆ ತಮ್ಮದೇ ಆದ ಕೊಡುಗೆ ನೀಡಿ ರಾಜ್ಯಮಟ್ಟದಲ್ಲಿ ತಾಲ್ಲೂಕಿನ ಕೀರ್ತಿಪತಾಕೆ ಹಾರಿಸುವಲ್ಲಿ ಇವರ ಶ್ರಮ ಅಪಾರವಾಗಿದೆ. ಭಾರತ ಸೇವಾದಳದ ತಾಲ್ಲೂಕು ಘಟಕದ ಸಂಘಟಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.