ADVERTISEMENT

ಮಾತೃಭಾಷೆಗೆ ಉನ್ನತ ಸ್ಥಾನ ಸಿಗಲಿ: ವಿಷ್ಣು ನಾಯ್ಕ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:01 IST
Last Updated 21 ಸೆಪ್ಟೆಂಬರ್ 2013, 8:01 IST

ದಾಂಡೇಲಿ: ’ಕನ್ನಡಿಗರ ಹೃದಯದಲ್ಲಿ ಮಾತೃಭಾಷೆಗೆ ಉನ್ನತ ಸ್ಥಾನ ಸಿಕ್ಕಾಗ ಮಾತ್ರ ಕನ್ನಡದ ನೈಜ ಅಭಿವೃದ್ಧಿ ಆಗಲು ಸಾಧ್ಯ, ನಮ್ಮ ಮಾತೃಭಾಷೆ­ಯನ್ನು ನಾವೇ ಕಡೆಗಣಿಸಿದರೆ ಹೆತ್ತ ತಾಯಿಯನ್ನು ವಂಚಿಸಿದಂತೆ ಆಗುತ್ತದೆ’ ಎಂದು ಹಿರಿಯ ಸಾಹಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮ  ತಜ್ಞ ಸಂಚಾಲಕ ವಿಷ್ಣು ನಾಯ್ಕ ಅಭಿಪ್ರಾಯಪಟ್ಟರು.

ಇಲ್ಲಿಯ ಬಂಗೂರುನಗರ ಪ.ಪೂ. ಕಾಲೇಜು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ, ಹಳಿಯಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಂಘಟಿಸಿದ್ದ ಕನ್ನಡ ಜಾಗೃತಿ ಕಾರ್ಯ­ಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ‘ಕನ್ನಡ ಮತ್ತು ಕನ್ನಡಿಗ’ ವಿಷಯ ಕುರಿತು ಉಪನ್ಯಾಸ ನೀಡಿದ ಸವದತ್ತಿಯ ಕೆ.ಎಂ. ಮಾಮನಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಎಫ್‌. ಭಜಂತ್ರಿ, ಇಂದು ನಗರಗಳಲ್ಲಿಯೇ ಕನ್ನಡ ಭಾಷೆ ಅಲಕ್ಷ್ಯಕ್ಕೊಳಗಾಗಿದೆ.

ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ನಮ್ಮ ಭಾಷೆಗೆ ಆಗಾಗ ಸಂಕಷ್ಟಗಳು ಬಂದು ಒದಗುತ್ತಿರುವುದು ವಿಪರ್ಯಾಸದ ಸಂಗತಿ, ಕನ್ನಡದ ಉಳಿವಿಗೆ ಎಲ್ಲ ತಂತ್ರಜ್ಞಾನ ವ್ಯವಸ್ಥೆ ಕನ್ನಡದಲ್ಲಿ ಲಭ್ಯವಾಗುವಂತಾಗಬೇಕು. ನಮ್ಮ ಭಾಷೆ ನಮ್ಮ ಬದುಕಿನ ಪ್ರಶ್ನೆಯಾಗಬೇಕು. ಇಂಗ್ಲಿಷ್‌ ಉದರದ ಭಾಷೆಯಾದರೆ, ಕನ್ನಡ ಹೃದಯದ ಭಾಷೆಯಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿದ್ದ ಪ್ರೊ.ಎಸ್‌.ಎಂ. ಕಾಚಾಪುರ ಮಾತನಾಡಿದರು. ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್‌. ವಾಸರೆ ಉಪಸ್ಥಿತರಿದ್ದರು. ಬಂಗೂರುನಗರ ಪ.ಪೂ. ಕಾಲೇಜು ಪ್ರಾಚಾರ್ಯ ಯು.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು  ಡಾ.ಆರ್‌.ಜಿ. ಹೆಗಡೆ ವಹಿಸಿದ್ದರು. ಮಿಲನ ಭಾಗ್ವತ್‌, ದೀಕ್ಷಾ ಭಂಡಾರಿ, ಐಶ್ವರ್ಯ ಪುರಾಣಿಕ, ಸದಾಶಿವ ಗೋಡಖಿಂಡಿ ಗೀತಗಾಯನ ಮಾಡಿದರು.  ಉಪಪ್ರಾಚಾರ್ಯ ಜಿ.ವಿ. ಭಟ್‌ ಸ್ವಾಗತಿಸಿದರು. ಉಪನ್ಯಾಸಕ ನೇಮಿನಾಥಗೌಡ ನಿರೂಪಿಸಿದರು. ಉಪನ್ಯಾಸಕ ಎನ್‌.ವಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT