ADVERTISEMENT

‘ಮಾದರಿ ನೀತಿಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 11:33 IST
Last Updated 11 ಏಪ್ರಿಲ್ 2018, 11:33 IST

ಭಟ್ಕಳ: ಯಾವುದೇ ಒತ್ತಡಕ್ಕೆ ಒಳಗಾಗದೇ ಚುನಾವಣೆ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್. ನಕುಲ್ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಯಾವುದೇ ಕಡೆಯಿಂದ ದೂರುಗಳು ಬಂದರೆ ಅದಕ್ಕೆ ತಕ್ಷಣ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ವಾಹನಗಳನ್ನು ಸಜ್ಜಾಗಿರಿಸಿ
ಕೊಂಡಿರಬೇಕು. ಹಣ ಸಾಗಣೆ ವಿಷಯದಲ್ಲಿ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದ್ದು, ಮದ್ಯ ಅಕ್ರಮ ಮಾರಾಟ, ಸಾಗಣೆ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಅನುಮತಿಯೊಂದಿಗೆ ರಜೆ ಪಡೆಯಲು ಅವಕಾಶ ಇದ್ದು, ಉಳಿದಂತೆ ಚುನಾವಣಾ ವಿಷಯದಲ್ಲಿ ಕಟ್ಟೆಚ್ಚರದಿಂದ ಇರಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಶೇಖರ್, ಆನಂದ್, ಉಪವಿಭಾಗಾಧಿಕಾರಿ ಎನ್. ಸಿದ್ದೇಶ್ವರ್ ಸೇರಿದಂತೆ ವಿವಿಧ ಸೆಕ್ಟರ್‌ ಮಟ್ಟದ ಅಧಿಕಾರಿಗಳು ಇದ್ದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀತಿಸಂಹಿತೆ ಪಾಠ

ಭಟ್ಕಳ: ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಉಪವಿಭಾಗಾಧಿಕಾರಿ ಎನ್. ಸಿದ್ದೇಶ್ವರ್ ಸೋಮವಾರ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಚುನಾವಣಾ ನೀತಿಸಂಹಿತೆ ಕುರಿತು ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಖರ್ಚು ₹ 28 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರಿ ಕಚೇರಿ, ವಾಹನಗಳನ್ನು ಬಳಸಲು ನಿರ್ಬಂಧ ಹೇರಲಾಗಿದೆ. ಪ್ರಚಾರ, ಸಭೆ, ಮೆರವಣಿಗೆ, ಧ್ವನಿವರ್ಧಕ ಬಳಕೆಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ತುಂಬಿ 49 ಗಂಟೆ ಪೂರ್ವದಲ್ಲಿ ಅನುಮತಿ ಪಡೆದುಕೊಳ್ಳಬೇಕು.

ಪತ್ರಿಕೆ, ಸ್ಥಳೀಯ ಪತ್ರಿಕೆ, ನ್ಯೂಸ್ ಚಾನಲ್‌ಗಳಲ್ಲಿ ಜಾಹೀರಾತು ನೀಡುವಾಗಲೂ ಲಿಖಿತ ಅನುಮತಿ ಹೊಂದಿರಬೇಕು ಎಂದು ತಿಳಿಸಿದರು. ವಿವಿಧ ಪಕ್ಷದ ಪ್ರಮುಖರಾದ ಚಂದ್ರಶೇಖರ ಗೌಡ, ವಿಠ್ಠಲ ನಾಯ್ಕ, ರಾಜು ನಾಯ್ಕ, ಕೃಷ್ಣಾನಂದ ಪೈ, ರಾಮ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.