ADVERTISEMENT

ಮಾವಿನ ಮರಕೆ ಹೂವೇ ಸಿಂಗಾರ...?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:45 IST
Last Updated 13 ಫೆಬ್ರುವರಿ 2012, 7:45 IST

ಮುಂಡಗೋಡ: ಮಾವಿನ ಗಿಡದ ತುಂಬ ಹೂ ಅರಳಿದರೆ ರೈತನಿಗೆ ಸಂತಸವಾಗುತ್ತದೆ. ಮಾವಿನ ಹಣ್ಣಿಗೆ ಮನಸೋತವರಿಲ್ಲ ಎನ್ನುವಂತೆ ಮಾವಿನ ಗಿಡ ಚಿಗುರೆಲೆಯೊಂದಿಗೆ `ಹೂ~ ಮೈದುಂಬಿಕೊಂಡರೆ ಅದರ ಸೊಬಗು ಮನಮೋಹಕವಾಗಿ ರುತ್ತದೆ.  ಆದರೆ ಈ ವರ್ಷ ಮಾವಿನ ಗಿಡದಲ್ಲಿ ಹೂ ಬಿಡುವ ಪ್ರಮಾಣ ಕುಂಠಿತಗೊಂಡಿರುವುದರಿಂದ ಮಾವು ಬೆಳೆಗಾರರಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡಿದೆ.

ಹಣ್ಣುಗಳ ರಾಜ ಮಾವು ವರ್ಷ ದಿಂದ ವರ್ಷಕ್ಕೆ ಹೆಚ್ಚಿನ ಬೇಡಿಕೆಯನ್ನು ಗಳಿಸುತ್ತಿದೆ. ಹೊಲಗದ್ದೆಗಳು, ತೋಟ ಗಳಲ್ಲಿ ಕಂಡು ಬರುವ ಮಾವಿನ ಗಿಡಗಳು ರೈತರ ಆದಾಯ ವೃದ್ದಿಯಲ್ಲಿ ನೆರವಾಗುತ್ತವೆ. ಈ ವರ್ಷ ಮಾವಿನ ಗಿಡ ಕಡಿಮೆ ಪ್ರಮಾಣದಲ್ಲಿ `ಹೂ~ ಬಿಟ್ಟಿದ್ದು ರೈತರ ಸಂತಸ ಕುಂದಲು ಕಾರಣವಾಗಿದೆ. ವ್ಯಾಪಾರಸ್ಥರು ಗಿಡ ದಲ್ಲಿರುವ ಹೂವಿನ ಪ್ರಮಾಣವನ್ನು ನೋಡಿ ಖರೀದಿಯ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಮೈತುಂಬ ಹೂ ಅರಳಿಸಿದ ಗಿಡ ಹೆಚ್ಚಿನ ದರಕ್ಕೆ ಹೋಗುತ್ತದೆ ಎನ್ನುವ ಮಾತು ರೈತ ರಿಂದ ಕೇಳಿಬರುತ್ತಿದ್ದು ಕಳೆದ ವರ್ಷ ಕ್ಕಿಂತ ಈ ಸಲ ಕಡಿಮೆ ಪ್ರಮಾಣದಲ್ಲಿ ಮಾವು `ಹೂ~ ಬಿಟ್ಟಿದೆ ಎನ್ನಲಾಗು ತ್ತಿದೆ.

5-6 ವರ್ಷದ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂ ಕಂಡುಬಂದರೆ 10 ವರ್ಷದ ಗಿಡಗಳು ಕಡಿಮೆ ಪ್ರಮಾಣದಲ್ಲಿ ಹೂ ಬಿಟ್ಟಿವೆ. ವಿಪರೀತ ಮಳೆಯಿಂದ ಭೂಮಿಯ ತೇವಾಂಶ ಕಡಿಮೆಯಾಗದಿರುವುದು ಹೂ ಬಿಡು ವಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ ಎಂದು ಪ್ರಗತಿಪರ ರೈತ ಶಿವಜ್ಯೋತಿ ಹುದ್ಲಮನಿ ಅಭಿಪ್ರಾಯ ವ್ಯಕ್ತಪಡಿ ಸುತ್ತಾರೆ.

ತಾಲ್ಲೂಕಿನ ಪಾಳಾ ಹೋಬಳಿಯಲ್ಲಿ ಮಾವು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಇಲ್ಲಿ ಬೆಳೆದಂತ ಮಾವು ಹೊರ ರಾಜ್ಯಗಳಿಗೆ ರಫ್ತಾಗುತ್ತದೆ. ಚಿಕ್ಕ ಚಿಕ್ಕ ಮಾವಿನ ಗಿಡಗಳು ಹೂವಿನಿಂದ ಸಿಂಗಾರ ಮಾಡಿಕೊಂಡಿರುವುದು ಮಾವು ಬೆಳೆಗಾರರಲ್ಲಿ ಸ್ವಲ್ಪ ಮಟ್ಟಿಗೆ ಸಂತಸ ಮೂಡಿಸಿದೆ. ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಟ್ಟರೂ ಅತಿಯಾದ ಇಬ್ಬನಿಯಿಂದ (ಮಂಜು) ಹೂ ಉದುರಿ ಮಾವಿನ ಇಳುವರಿ ಕಡಿಮೆಯಾಗಿತ್ತು.

ರೈತರು ನಿರೀಕ್ಷಿಸಿದಷ್ಟು ಫಲ ಬರದೇ ಮಾವಿನ ಬೆಲೆ ಗಗನಕ್ಕೇರಿತ್ತು. ಕಳೆದ ಕೆಲ ದಿನಗಳಿಂದ ಇಬ್ಬನಿ ಬೀಳುತ್ತಿರುವುದು ಹಾಗೂ ಅಂಟು ರೋಗ ಮಾವು ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ.

ಮಾವು ಬೆಳೆಯಲ್ಲಿ ಕಂಡುಬರುವ ಬೂದಿ ರೋಗ ಮತ್ತು ಜಿಗಿ ಕೀಟ ನಿಯಂತ್ರಣಕ್ಕೆ ಪ್ರತಿ ಲೀ. ನೀರಿಗೆ 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಹಾಗೂ 4 ಗ್ರಾಂ. ಸೆವಿನ್ (ಕಾರ್ಬ ರಿಲ್) ಬೆರೆಸಿ ಸಿಂಪರಣೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.