ADVERTISEMENT

ಮುಂಡಿಗೆಕೆರೆಯಲ್ಲಿ ಬೆಳ್ಳಕ್ಕಿ ಸೀಮಂತ !

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 8:41 IST
Last Updated 5 ಜುಲೈ 2017, 8:41 IST
ಶಿರಸಿ ತಾಲ್ಲೂಕಿನ ಬಾಡಲಕೊಪ್ಪ ಮಜಿರೆಯ ಮುಂಡಿಗೆಕೆರೆಯಲ್ಲಿ ಗೂಡುಕಟ್ಟಿ ಸಂಸಾರ ಆರಂಭಿಸಿರುವ ಬೆಳ್ಳಕ್ಕಿಗಳು
ಶಿರಸಿ ತಾಲ್ಲೂಕಿನ ಬಾಡಲಕೊಪ್ಪ ಮಜಿರೆಯ ಮುಂಡಿಗೆಕೆರೆಯಲ್ಲಿ ಗೂಡುಕಟ್ಟಿ ಸಂಸಾರ ಆರಂಭಿಸಿರುವ ಬೆಳ್ಳಕ್ಕಿಗಳು   

ಶಿರಸಿ: ತಾಲ್ಲೂಕಿನ ಬಾಡಲಕೊಪ್ಪ ಮಜಿರೆಯ ಕೆರೆಯಲ್ಲಿ ಸೊಂಪಾಗಿ ಬೆಳೆದಿರುವ ಮುಂಡಿಗೆ ಗಿಡಗಳ ಮೇಲೆ ದೂರದಿಂದ ಹತ್ತಿ ಉಂಡೆಯಂತೆ ಕಾಣುವ ನೂರಾರು ಬೆಳ್ಳಕ್ಕಿಗಳ ಕಲರವ. ಗೂಡು ಕಟ್ಟಿ ಸಂಸಾರ ಆರಂಭಿಸಿರುವ ಬಾನಾಡಿಗಳು ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿವೆ.

‘ಮೇ ತಿಂಗಳ ಕೊನೆಯಲ್ಲಿ 8–10 ಬೆಳ್ಳಕ್ಕಿಗಳು ಬಂದು ಕೆರೆಯ ಮೇಲೆ ಹಾರಾಟ ನಡೆಸಿ ಹೋಗಿದ್ದವು. ಕೆಲವು ದಿನಗಳ ನಂತರ ತಂಡದಲ್ಲಿ ಬಂದ ಹಕ್ಕಿಗಳು ಮುಂಗಾರು ಆರಂಭದ ಮುನ್ಸೂಚನೆ ನೀಡಿದ್ದವು. ಬೆಳ್ಳಕ್ಕಿ ಕೆರೆಗೆ ಇಳಿದು ಗೂಡು ಕಟ್ಟಲು ಪ್ರಾರಂಭಿಸಿದರೆ ಮುಂಗಾರು ಆರಂಭವಾಗುವ ಸೂಚನೆ ಅದು.

ಜೂನ್ 12ರಿಂದ ಹಕ್ಕಿಗಳು ಕಡ್ಡಿಗಳನ್ನು ಹೆಕ್ಕಿ ತಂದು ಗೂಡು ಕಟ್ಟಲು ಶುರು ಮಾಡಿದ್ದವು. ಆ ನಂತರದಲ್ಲಿ ದಿನದಿಂದ ದಿನಕ್ಕೆ ಪಕ್ಷಿಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಪ್ರಸ್ತುತ 500ರಷ್ಟು ಪಕ್ಷಿಗಳು ಕೆರೆಯ ಮಧ್ಯೆ ಗೂಡು ಕಟ್ಟಿವೆ’ ಎನ್ನುತ್ತಾರೆ ಅನೇಕ ವರ್ಷಗಳಿಂದ ಪಕ್ಷಿಗಳ ಚಲನವಲನ ಗಮನಿಸುತ್ತಿರುವ  ರತ್ನಾಕರ ಹೆಗಡೆ ಬಾಡಲಕೊಪ್ಪ.

ADVERTISEMENT

‘ಸೋಂದಾ ಜಾಗೃತ ವೇದಿಕೆಯು 1995ರಿಂದ ಮುಂಡಿಗೆಕೆರೆ ಪಕ್ಷಿಧಾಮದ ಸಂರಕ್ಷಣೆಯನ್ನು ದಿವಂಗತ ಪಿ.ಡಿ. ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಮಾಡುತ್ತ ಬಂದಿದೆ. ಇಲ್ಲಿಯವರೆಗೆ ವೇದಿಕೆ ಸದಸ್ಯರು ಗಮನಿಸಿದಂತೆ ಬೆಳ್ಳಕ್ಕಿಗಳು ಮೇ ತಿಂಗಳ ಕೊನೆ ಅಥವಾ ಜೂನ್ 10ರ ಒಳಗೆ ಮುಂಡಿಗೆ ಕೆರೆಗೆ ಇಳಿದು ಗೂಡು ಕಟ್ಟಿದರೆ ಆ ವರ್ಷ ಹೆಚ್ಚು ಮಳೆ ದಾಖಲಾಗುತ್ತದೆ.

ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆ ಇಟ್ಟು ಕಾವು ಕೊಡುವ ವೇಳೆಗೆ ಹೆಚ್ಚು ಮಳೆ ಬೇಕು. ಉತ್ತಮ ಮಳೆಯ ಲಕ್ಷಣ ಇದ್ದರೆ ಮಾತ್ರ ಅಧಿಕ ಸಂಖ್ಯೆಯಲ್ಲಿ ಗೂಡು ಕಟ್ಟುತ್ತವೆ. ಈ ವರ್ಷ ಜೂನ್ 9ರಿಂದ ಬೆಳ್ಳಕ್ಕಿಗಳು ಬರಲಾರಂಭಿಸಿವೆ. ಇನ್ನೂ ಹೊರಗಿನಿಂದ ಪಕ್ಷಿಗಳು ಬರುತ್ತಲೇ ಇವೆ’ ಎಂದು ಅವರು ಹೇಳುತ್ತಾರೆ.

‘ಪ್ರಗತಿಪರ ರೈತ ಧಾರವಾಡದ ಚೆನ್ನಪ್ಪ ಮಟ್ಟಿ ಅವರು ಮುಂಡಿಗೆಕೆರೆಗೆ ಬರುವ ಪಕ್ಷಿಗಳ ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿ ಕೆರೆಗೆ ಬೆಳ್ಳಕ್ಕಿಗಳು ಇಳಿದ ನಾಲ್ಕೈದು ದಿನಗಳಲ್ಲಿ ಧಾರವಾಡ ಭಾಗದಲ್ಲಿ ಉತ್ತಮ ಮಳೆಯಾಗುತ್ತದೆ ಎಂಬುದನ್ನು ಅವರು ಅನೇಕ ವರ್ಷಗಳ ಅನುಭವದಲ್ಲಿ ಗಮನಿಸಿದ್ದಾರಂತೆ.

ಮುಂಡಿಗೆ ಕೆರೆ ಈಗ ಬೆಳ್ಳಕ್ಕಿಗಳ ಪ್ರಸೂತಿ ಗೃಹವಾಗಿದೆ. ಬಾನಾಡಿಗಳು ಸಂತಾನಾಭಿವೃದ್ಧಿಯ ಸಂಭ್ರಮದಲ್ಲಿವೆ. ವೀಕ್ಷಣಾ ಗೋಪುರದಿಂದ ಪಕ್ಷಿಗಳನ್ನು ನೋಡಲು ಜುಲೈ ಮಧ್ಯದಿಂದ ನವೆಂಬರ್ ಕೊನೆ ಸಕಾಲವಾಗಿದೆ’ ಎಂದು ರತ್ನಾಕರ ಹೆಗಡೆ ಹೇಳಿದರು.

* * 
ಜುಲೈ ಮೊದಲ ವಾರದಿಂದ ನವೆಂಬರ್ ಕೊನೆಯವರೆಗೆ ಪಕ್ಷಿಗಳಿಗೆ ರಕ್ಷಣೆ ನೀಡುವ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಬೇಕು
ರತ್ನಾಕರ ಹೆಗಡೆ ,ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.