ADVERTISEMENT

ಮುಂಬೈ-ಮೈಸೂರಿಗೆ ಸೈಕ್ಲಿಂಗ್ ಜಾಥಾ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:20 IST
Last Updated 17 ಮಾರ್ಚ್ 2012, 9:20 IST

ಕಾರವಾರ: ನೌಕಾಪಡೆಯ ಕುರಿತು ಜಾಗೃತಿ ಮೂಡಿಸಲು ಮುಂಬೈ ನೌಕಾ ನೆಲೆಯಿಂದ ಮೈಸೂರಿಗೆ ಸೈಕ್ಲಿಂಗ್ ಜಾಥಾ ಕೈಗೊಂಡ `ಐಎನ್‌ಎಸ್ ಮೈಸೂರು~ ಯುದ್ಧನೌಕೆಯ ಕಮಾಂ ಡರ್ ಎ. ಸೆಂಥಿಲ್‌ಕುಮಾರ ನೇತೃತ್ವದ ತಂಡ ಗುರುವಾರ ಸಂಜೆ ನಗರಕ್ಕೆ ಆಗಮಿಸಿತು.

ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್ ಅವರು ನಗರದ `ಟ್ಯಾಗೋರ ಕಡಲತೀರದಲ್ಲಿರುವ `ಚಪಲ~ ಯುದ್ಧ ನೌಕೆ ಸಮೀಪ ಸೈಕ್ಲಿಂಗ್ ತಂಡವನ್ನು ಬರಮಾಡಿಕೊಂಡರು. ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಎ.ಕೆ.ಜೈನ್, ಅಪರ ಜಿಲ್ಲಾ ಧಿಕಾರಿ ಡಾ. ನರಸಿಂಹಮೂರ್ತಿ, ನಗರ ಸಭೆ ಆಯುಕ್ತ ಡಾ. ಉದಯಕುಮಾರ ಶೆಟ್ಟಿ ಹಾಜರಿದ್ದರು.

ಕಮಾಂಡರ್ ಸೆಂಥಿಲ್‌ಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ನೌಕಾಪಡೆಗೆ ಸೇರಿದ ಪ್ರಮುಖ ಯುದ್ಧ ನೌಕೆ ಕರ್ನಾಟಕದ ಐತಿಹಾಸಿಕ ನಗರ ಮೈಸೂರಿನ ಹೆಸರು ಹೊಂದಿದೆ. ಈ ಹಡಗಿನ ನಿರ್ವಹಣೆ ನಡೆಯುತ್ತಿದ್ದು ಈ ಅವಧಿಯಲ್ಲಿ ನೌಕಾನೆಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ನೌಕಾಪಡೆ ಜನರೊಂದಿಗೆ ಇದೆ ಎನ್ನುವ ಭಾವನೆ ಮೂಡಿಸಲು `ಐಎನ್‌ಎಸ್ ಮೈಸೂರು~ ಯುದ್ಧನೌಕೆಯ ನಾವಿಕರು ಮುಂಬೈನಿಂದ ಮೈಸೂರಿಗೆ ಸೈಕಲ್ ಜಾಥಾ ಹಮ್ಮಿಕೊಂಡಿದೆ. ಮಾರ್ಗ ಮಧ್ಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ~ ಎಂದರು.

ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ಎ.ಕೆ. ಜೈನ್ ಅವರು ಶುಕ್ರವಾರ ( ಮಾ. 16) ನೌಕಾನೆಲೆಯ ಅರಗಾ ಗೇಟ್ ಬಳಿ ಈ ತಂಡವನ್ನು ಬಿಳ್ಕೋಡಲಿದ್ದಾರೆ. ಲೆಫ್ಟಿನೆಂಟ್ ಕಮಾಂಡರ್ ವಿ.ಟಿ.ಅಲೆಕ್ಸಾಂಡರ್, ವಿ.ಪಿ.ಸಿಂಗ್, ವಿ.ಶೇಷಗಿರಿ, ಎ.ಭಂಡಾರಿ, ಮೋಹನ್ ಪರಿಚಾ, ಎಸ್.ಕೆ.ಜೊಲಿ, ರಾಹುಲ್ ಚೌಧರಿ, ವಿಷ್ಣು ಚಂದ್ರ, ರೋಹಿತ್ ದಿಂಗಿಯಾ, ಸತೇಂದ್ರ ಕುಮಾರ, ಅನುರಾಗ್ ಸಿಂಗ್ ಸೈಕ್ಲಿಂಗ್ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT