ADVERTISEMENT

ಮುಳುಗುತಿದೆ ಮಾನವ ಹಕ್ಕುಗಳ ದೋಣಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:00 IST
Last Updated 13 ಅಕ್ಟೋಬರ್ 2011, 9:00 IST

ಕುಮಟಾ: ಮುಳುಗುತ್ತಿರುವ ಮಾನವಹಕ್ಕುಗಳ ದೋಣಿಯನ್ನು ಉಳಿಸುವ ಕೆಲಸ ಇಂದಿನ ದಿನಗಳಲ್ಲಿ ಆಗಬೇಕಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಡಾ. ಎಸ್.ಆರ್. ನಾಯಕ್ ತಿಳಿಸಿದರು.

ಕುಮಟಾದ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ `ಪ್ರಾಚೀನ ಭಾರತದಲ್ಲಿ ಮಾನವ ಹಕ್ಕುಗಳು~ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

`ಭಾರತ ಜೀವನ ಮೌಲ್ಯಗಳ ಗಣಿಯೇ ಆಗಿದೆ. ಆದರೆ ಈ ದೇಶದ ಜನತೆ ಮಾತ್ರ ಇಂದು ಅವುಗಳಿಂದ ದೂರ ಸರಿಯುತ್ತಿರುವುದು ಖೇದಕರ ಸಂಗತಿ. ಇಲ್ಲಿ ಬದುಕಲು ಕನಿಷ್ಠ ಗುಡಿಸಲು ಸೌಲಭ್ಯ ಕೂಡ ಇಲ್ಲದ ಜನರು ನಡುವೆಯೇ ವಾಸಿಸುವ ಮನೆಗೇ ನೂರಾರು ಕೋಟಿ ವ್ಯಯಿಸುವ ಶ್ರೀಮಂತರೂ ಇದ್ದಾರೆ. ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಮೇಲ್ವರ್ಗದ ಮಹಿಳೆಯರೂ ಈ ದೇಶದಲ್ಲಿ ಹಿಂದುಳಿದ ವರ್ಗಕ್ಕೆ ಸೇರಲು ಅರ್ಹರು. ಭಾರತೀಯರು ಆಡುವುದೊಂದು ಮಾಡುವುದೊಂದು ಎಂಬ ಮಾತು ಇಂದಿಗೂ ವಿದೇಶಗಳಲ್ಲಿ ಸಾಮಾನ್ಯ~ ಎಂದು ಅವರು ಹೇಳಿದರು.

ಪ್ರಧಾನ ಭಾಷಣ ಮಾಡಿದ ಮೈಸೂರು ವಿವಿ ರಾಜಕೀಯಶಾಸ್ತ್ರ ವಿಭಾಗದ ಮುಖ್ಯಸ್ಥ ಮುಜಾಫರ್ ಎಚ್. ಅಸ್ಸಾದಿ, `ಜಾಗತೀಕರಣ ನೀತಿಯ ಹಿಂದೆ ಮಾರುಕಟ್ಟೆಯನ್ನು ಬಾಚಿ ಕೊಳ್ಳುವ ಹುನ್ನಾರವಿದ್ದ ಹಾಗೇ ಮಾನವ ಹಕ್ಕುಗಳ ಆಯೋಗ ರಚನೆಯ ಹಿಂದೆಯೂ ಪ್ರಜಾಪ್ರ ಭುತ್ವದ ಮರುನಿರ್ಮಾಣದ ಉದ್ದೇಶವಿದೆ. ಈ ದೇಶದ ಮಹಾಕಾವ್ಯಗಳಲ್ಲಿ ಬರುವ ಕರ್ಣನ ಹತ್ಯೆ, ಏಕಲವ್ಯನ ಹೆಬ್ಬೆರಳು ಪಡೆಯುವುದು ಮುಂತಾದ ಪ್ರಸಂಗಗಳಲ್ಲಿ ಮಾನವ ಹಕ್ಕುಗಳ ಪ್ರಶ್ನೆ ಖಂಡಿತಾ ಉದ್ಭವಿಸುತ್ತದೆ. ಎಲ್ಲಕ್ಕೂ ಧರ್ಮ ಬಳಕೆ ಯಾಗುತ್ತಿರುವ ಈ ದೇಶಕ್ಕೆ ಜಾಗತಿಕ ಮಟ್ಟದ ಮಾನವ ಹಕ್ಕುಗಳ ನೀತಿ ಅನ್ವಯವಾಗದು~ ಎಂದರು.

ಪ್ರಾಚಾರ್ಯ ಡಾ. ವಿ.ಕೆ. ಹಂಪಿಹೋಳಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿಭಾಗ ಪ್ರಾಧ್ಯಾ ಪಕ ಡಾ. ಯು.ಜಿ. ಶಾಸ್ತ್ರಿ ಸ್ವಾಗತಿಸಿದರು. ಪ್ರೊ. ವಿದ್ಯಾ ತಲಗೇರಿ ಹಾಗೂ ಡಾ. ಶಂಕರ ಭಟ್ಟ ಪರಿ ಚಯಿಸಿದರು. ಡಾ. ಮಹೇಶ ಅಡಕೋಳಿ, ಡಾ. ಜಿ.ಟಿ. ಕುಚಿನಾಡ, ಡಾ.ಟಿ.ಜಿ. ಭಟ್ಟ ಹಾಸ ಣಗಿ, ಪ್ರೊ. ಎಂ. ಜಿ. ನಾಯ್ಕ, ನಿವೃತ್ತ ಪ್ರಾಚಾರ್ಯ ಪ್ರೊ. ಡಿ.ಎಸ್. ಆನಂದ,  ವಕೀಲರಾದ ಪ್ರದೀಪ ನಾಯಕ, ಸತ್ಯನಾರಾಯಣ ಭಟ್, ಹೊನ್ನಾವರ ಸಿ.ಪಿ.ಐ. ಪ್ರಮೋದ ರಾವ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.