ADVERTISEMENT

ಮೂವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌

ಹೈಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಅಧಿಕಾರಿಗಳಿಂದ ಅರಣ್ಯ ಅಭಿವೃದ್ಧಿ ಶುಲ್ಕ ವಸೂಲಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 9:37 IST
Last Updated 13 ಮಾರ್ಚ್ 2018, 9:37 IST

ಕಾರವಾರ: ‘ಅರಣ್ಯ ನಾಟಾ ಹರಾಜಿನಲ್ಲಿ ಹೆಚ್ಚುವರಿಯಾಗಿ ಪಡೆಯುತ್ತಿದ್ದ ಅರಣ್ಯ ಅಭಿವೃದ್ಧಿ ಶುಲ್ಕದ (ಎಫ್‌ಡಿಎಫ್) ವಿರುದ್ಧ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಮೂವರು ಅರಣ್ಯಾಧಿಕಾರಿಗಳಿಗೆ ಹೈಕೋರ್ಟ್‌ನ ಧಾರವಾಡ ಪೀಠ ಇದೇ 6ರಂದು ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ’ ಎಂದು ದಾಂಡೇಲಿಯ ಪ್ರೇಮ್ ವುಡ್ ಡೆಕೋರ್ಸ್‌ ಮಾಲೀಕ ಪ್ರೇಮಾನಂದ ಗವಸ್ ಸೋಮವಾರ ಇಲ್ಲಿ ತಿಳಿಸಿದರು.

‘ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ನಂತರವೂ ಮರಮುಟ್ಟುಗಳ ಖರೀದಿಗೆ ಇ– ಟೆಂಡರ್ ವ್ಯವಸ್ಥೆಯಲ್ಲಿ ಶೇ 12ರಷ್ಟು ಎಫ್‌ಡಿಎಫ್ ಅನ್ನು ಗುತ್ತಿಗೆದಾರರಿಂದ ಸಂಗ್ರಹಿಸಲಾಗುತ್ತಿತ್ತು. ಜತೆಗೆ ಮರಮುಟ್ಟು ಖರೀದಿದಾರರಿಂದ ಶೇ 18ರಷ್ಟು ಜಿಎಸ್‌ಟಿ, ಶೇ 12ರಷ್ಟು ಅಭಿವೃದ್ಧಿ ಶುಲ್ಕ ಹಾಗೂ ಶೇ 2.5ರಷ್ಟು ಇತರ ಶುಲ್ಕ ಸೇರಿ ಒಟ್ಟು ಶೇ 32.5ರಷ್ಟು ತೆರಿಗೆಯ ಬದಲು ಶೇ 34.96ರಷ್ಟನ್ನು ಪಡೆಯಲಾಗುತ್ತಿತ್ತು.

ಇದರ ವಿರುದ್ಧ ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. 2017ರ ಡಿಸೆಂಬರ್‌ನಲ್ಲಿ ಅದು ತಡೆಯಾಜ್ಞೆ ನೀಡಿತ್ತು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

‘ಆದೇಶದ ನಂತರವೂ ಅಧಿಕಾರಿಗಳು ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಕಾರ್ಯದರ್ಶಿ ವಿಜಯ ಗೋಗಿ, ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ ಹಾಗೂ ದಾಂಡೇಲಿ ಮರಮುಟ್ಟು ಸಂಗ್ರಹಾಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ನೋಟಿಸ್ ಜಾರಿ ಮಾಡಲು ನ್ಯಾಯಾಲಯ ಸೂಚಿಸಿದೆ’ ಎಂದು ತಿಳಿಸಿದರು.

‘ಗುತ್ತಿಗೆದಾರರಿಂದ ಹೆಚ್ಚುವರಿಯಾಗಿ ಪಡೆಯುತ್ತಿದ್ದ ತೆರಿಗೆ ಯಾವ ಖಾತೆಗೆ ಜಮೆಯಾಗುತ್ತಿತ್ತು ಎಂಬ ಬಗ್ಗೆ ಅರಣ್ಯ ಇಲಾಖೆಯಲ್ಲಿ ಅಥವಾ ಅಧಿಕಾರಿಗಳಲ್ಲಿ ಅಧಿಕೃತ ಮಾಹಿತಿ ಇರಲಿಲ್ಲ. ರಾಜ್ಯದಲ್ಲೇ ಪ್ರಥಮ ಬಾರಿಗೆ, ಅರಣ್ಯ ಕಟ್ಟಿಗೆ ಖರೀದಿದಾರರಿಂದ ಅಧಿಕಾರಿಗಳ ಮೇಲೆ ದಾಖಲಾಗಿರುವ ಪ್ರಕರಣ ಇದಾಗಿದೆ. ಧಾರವಾಡದ ಸಚಿನ್ ಮಗದುಮ್ ನಮ್ಮ ಪರ ವಾದ ಮಂಡಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.