ಗೋಕರ್ಣ: ಅಖಿಲ ಭಾರತೀಯ ಸ್ವಾಮಿ ಸಮರ್ಥ ಗುರುಪೀಠ ಶ್ರೀಕ್ಷೇತ್ರ ತ್ರಯಂಭಕೇಶ್ವರ ಅವರ ಅನುಯಾಯಿಗಳಾದ ಮಹಾರಾಷ್ಟ್ರದ ಅಸಂಖ್ಯಾತ ಭಕ್ತರು ಮಹಾಮೃತ್ಯುಂಜಯ ಯಂತ್ರ ಆವರಣ ಪೂಜೆಗೆ ಗೋಕರ್ಣಕ್ಕೆ ಆಗಮಿಸಲಿದ್ದಾರೆ.
ಮಾರ್ಚ್ 9 ರಂದು ಗೋಕರ್ಣದ ಭದ್ರಕಾಳಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಾಮಿ ಸಮರ್ಥ ಗುರುಪೀಠ ನಾಸಿಕದ ಪೀಠಾಧೀಶರಾದ ಶ್ರೀ ಮೋರೆ ಬಾಬಾ ಗುರೂಜಿ ಈ ಕಾರ್ಯಕ್ರಮದ ಮುಖ್ಯ ನೇತೃತ್ವ ವಹಿಸಲಿದ್ದು, ಪೂಜೆ ನಂತರ ಬಂದ ಭಕ್ತಾಧಿಗಳಿಗೆ ಆಶೀರ್ವಚನ ನೀಡಲಿದ್ದಾರೆ. ಗೋಕರ್ಣ ತೀರ್ಥ ಕ್ಷೇತ್ರ ಆನಾದಿ ಕಾಲದಿಂದಲೂ ಇದ್ದು ಈ ಕ್ಷೇತ್ರದ ಬಗ್ಗೆ ಶಿವ ಪುರಾಣ, ಸ್ಕಂದ ಪುರಾಣ ಮತ್ತು ಗುರು ಚರಿತ್ರೆಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ನಾವು ಈ ಕ್ಷೇತ್ರವನ್ನು ಆಯ್ಕೆ ಮಾಡಿದ್ದೇವೆ. ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ರಾಜ್ಯದಾದ್ಯಂತ ಇರುವ ಶ್ರೀ ಸ್ವಾಮಿ ಸಮರ್ಥರ ಶಿಷ್ಯರು ಆಗಮಿಸಲಿದ್ದು ಈಗಾಗಲೇ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ತಮ್ಮ ಸೀಟನ್ನು ಕಾಯ್ದಿರಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಿಂದ ಬಂದ 100ಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಭದ್ರಕಾಳಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದೆ. ಯಾತ್ರಿಕರಿಗೆ ಊಟದ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆಗಾಗಿ ಕಾಲೇಜಿನ ಎದುರು ಇರುವ ಬೃಹತ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.