ADVERTISEMENT

ಯಕ್ಷಗಾನ ಕಲೆಯ ಶ್ರೇಷ್ಠತೆ ರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 7:20 IST
Last Updated 3 ಏಪ್ರಿಲ್ 2013, 7:20 IST

ಸಿದ್ದಾಪುರ: `ಯಕ್ಷಗಾನದ ಶ್ರೇಷ್ಠತೆ ಉಳಿಯಬೇಕಾದರೆ ಮತ್ತು ಆ ಕಲೆ ಸರಿಯಾದ ದಾರಿಯಲ್ಲಿ ಮುಂದುವರಿಯಬೇಕಾದರೆ ಕಲಾವಿದರೊಡನೆ ಪ್ರೇಕ್ಷಕರ ಕರ್ತವ್ಯ ಕೂಡ ಇರುತ್ತದೆ' ಎಂದು ಯಕ್ಷಗಾನ ಸಂಶೋಧಕಿ ಡಾ.ವಿಜಯನಳಿನಿ ರಮೇಶ ಹೇಳಿದರು.

ಬೆಂಗಳೂರಿನ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಕಾರದೊಂದಿಗೆ, ಸ್ಥಳೀಯ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ತಾಲ್ಲೂಕಿನ ಕವಲಕೊಪ್ಪದ ವಿನಾಯಕ ದೇವಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ದಿ.ಬೆಳಸಲಿಗೆ ಗಣಪತಿ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಕಲಾವಿದರು ಪಾತ್ರದ ಕುರಿತು ಯೋಚಿಸುವ ಬದಲಿಗೆ ತನ್ನ ಬಗ್ಗೆ ಯೋಚಿಸುವುದರಿಂದ ಪಾತ್ರದ ಔಚಿತ್ಯ ಕಾಪಾಡುವುದಕ್ಕೆ ಆಗುವುದಿಲ್ಲ. ಒಳ್ಳೆಯ ಕಲಾವಿದರೂ ಕೂಡ ತಪ್ಪು ದಾರಿಗೆ ಹೋದರೆ ಅದಕ್ಕೆ ನಾವು(ಪ್ರೇಕ್ಷಕರು) ಕಾರಣ. ಕಲಾವಿದರ ಸರಿ-ತಪ್ಪುಗಳ ಬಗ್ಗೆ ಪ್ರೇಕ್ಷಕರೂ ತಿಳಿಸಬೇಕು. ಇಂದು  ಯಕ್ಷಗಾನಕ್ಕೆ ನಿರ್ದೇಶಕರ ಕೊರತೆ ಕಾಡುತ್ತಿದೆ.ಆದ್ದರಿಂದ ಯಾವುದೇ ತಂಡ ಯಕ್ಷಗಾನ ಪ್ರದರ್ಶನ ನೀಡುವ ಮೊದಲು ಆ ಕಲೆಯ ಬಗ್ಗೆ ತಿಳಿದುಕೊಂಡವರ ಎದುರು  ರಿಹರ್ಸಲ್ ನೀಡುವುದು ಉತ್ತಮ' ಎಂದರು.

`ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಆದರೆ ನಾವು ಅದನ್ನು ಹೊರಜಗತ್ತಿಗೆ ತೋರುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಇದರಿಂದ ನಮ್ಮ ಪ್ರತಿಭೆ  ನಮ್ಮದಾಗಿ ಉಳಿಯುತ್ತಿಲ್ಲ. ಬೆಳಸಲಿಗೆ ಗಣಪತಿ ಹೆಗಡೆ ಇಡೀ ಬದುಕನ್ನು ಯಕ್ಷಗಾನ ಕಲೆಗಾಗಿ ಸವೆಸಿದ್ದರಲ್ಲದೇ, ಅವರು ಆ ಕಲೆಯ ಶ್ರದ್ಧಾವಂತ ವಿದ್ಯಾರ್ಥಿಯೂ ಆಗಿದ್ದರು' ಎಂದರು.

   ಮುಖ್ಯ ಅತಿಥಿಯಾಗಿ ಬೆಳಸಲಿಗೆ ಗಣಪತಿ ಹೆಗಡೆ ಜನ್ಮ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾಶ್ಯಪ ಪರ್ಣಕುಟಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಬೆಳಸಲಿಗೆ ಗಣಪತಿ ಹೆಗಡೆ ರಚಿಸಿರುವ `ಅಹಲ್ಯಾಶಾಪ' ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT