ADVERTISEMENT

ಯಾಂತ್ರೀಕರಣದಿಂದ ವ್ಯಕ್ತಿತ್ವಕ್ಕೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:10 IST
Last Updated 1 ಅಕ್ಟೋಬರ್ 2012, 6:10 IST

ದಾಂಡೇಲಿ: `ನಮ್ಮ ದೇಶದ ಔದ್ಯಮಿಕ ಕ್ಷೇತ್ರದಲ್ಲಿ  ಮಿತಿಮೀರಿದ ಯಾಂತ್ರೀಕರಣ ನೀತಿ ದೇಶದ ಮಾನವ ಸಂಪನ್ಮೂಲವನ್ನು ವ್ಯರ್ಥಗೊಳಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಮಾನವ ಸಂಪನ್ಮೂಲ ಹಾಗೂ ಯಾಂತ್ರೀಕ ಕೌಶಲ್ಯಗಳೆರಡನ್ನು ಸಮಾನವಾಗಿ ಬಳಸಿಕೊಳ್ಳುವ ನೀತಿ ರೂಪಗೊಳ್ಳಬೇಕಾಗಿದೆ~ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಕೆ.ಶ್ರೀಧರರಾವ್ ತಿಳಿಸಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಹಾಗೂ ದಾಂಡೇಲಿ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ  ಇಲ್ಲಿಯ ರಂಗನಾಥ ಸಭಾಗೃಹದಲ್ಲಿ ಭಾನುವಾರ ನಡೆದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಔದ್ಯೋಗಿಕ ರಂಗದಲ್ಲಿ ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಮುಗ್ದ ಕಾರ್ಮಿಕರನ್ನು ದಿಕ್ಕು ತಪ್ಪಿಸುವ ಹೋರಾಟದಲ್ಲಿ ತೊಡಗಿಸಬಾರದು. ಕಾರ್ಮಿಕ ಹಾಗೂ ಮಾಲೀಕರ ನಡುವಿನ ಘರ್ಷಣೆ ಸಹಜ. ಆದರೆ ನ್ಯಾಯೋಚಿತ ಪರಿಹಾರವನ್ನು ಕಾನೂನಿನ ಅರಿವು ಇಟ್ಟುಕೊಂಡು ಪಡೆದುಕೊಳ್ಳಬೇಕು~ ಎಂದು ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಶ್ವನಾಥ ವಿ.ಅಂಗಡಿ ಮಾತನಾಡಿ, `ಕಾರ್ಮಿಕರು ಇಂದು ಕಾನೂನಿನ ಹಲವಾರು ಅನುಕೂಲತೆಗಳ ಲಾಭವನ್ನು ಪಡೆದುಕೊಂಡು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು~ ಎಂದರು.

ಜಂಟಿ ಸಂಧಾನ ಸಮಿತಿ ಅಧ್ಯಕ್ಷ ಬಿ.ಡಿ.ಹಿರೇಮಠ ಮಾತನಾಡಿ, `ಹುಟ್ಟಿನಿಂದ ಸಾವಿನವರೆಗೂ ಅಗತ್ಯವಿರುವ ಕಾನೂನಿನ ಅರಿವನ್ನು ಮೊದಲು ಎಲ್ಲರೂ ಹೊಂದಬೇಕು. ತಿಳಿವಳಿಕೆಯೊಂದಿಗೆ ಕಾರ್ಮಿಕ ಮತ್ತು ಮಾಲೀಕ ಇಬ್ಬರಲ್ಲಿಯೂ ಉತ್ತಮ ನಡವಳಿಕೆಯೂ ಬರಬೇಕು. ಆಗ ಉಧ್ಯಮ ಕ್ಷೇತ್ರದಲ್ಲಿ ಸಮನ್ವಯತೆ ಮೂಡಲು ಸಾಧ್ಯ~ ಎಂದರು.

ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಅಧ್ಯಕ್ಷ ವಿ.ಶ್ರೀಶಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ತಿಮ್ಮಳ್ಳಿ ಎಂ.ಎಸ್, ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯದರ್ಶಿ ಪಿ.ಕೆ.ಮುಂದ್ರಾ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಬಿ.ಎಸ್.ಸಂಗಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಎರಡನೇ ಭಾಗವಾಗಿ ಕಾನೂನು ಅರಿವು ಹಾಗೂ ಪ್ರಶ್ನೋತ್ತರ ಕಾರ್ಯಾಗಾರ ನಡೆಯಿತು. ಹುಬ್ಬಳ್ಳಿಯ ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ಪಾರ್ಥಸಾರಥಿ ಅವರು ಕಾರ್ಖಾನೆಗಳ ಕಾನೂನು ಸಮಾನ ಕೆಲಸಕ್ಕೆ ಸಮಾನ ವೇತನದ ಕಾನೂನು ಹಾಗೂ ಗುತ್ತಿಗೆ ಕಾರ್ಮಿಕರ ಕಾನೂನುಗಳ ಕುರಿತು ಕಾರ್ಮಿಕರೊಂದಿಗೆ ಸಂಭಾಷಣೆ ನಡೆಸಿದರು.

ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ತಿಮ್ಮಳ್ಳಿ ಎಂ.ಎಸ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಪ್ರಫುಲ್ಲಾ ಎಸ್.ನಾಯ್ಕ ಉಪನ್ಯಾಸ ನೀಡಿದರು. ಸಿದ್ದಲಿಂಗಪ್ರಭು ಸ್ವಾಗತಿಸಿದರು. ಹನುಮಂತ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಭಾಮಿನಿ  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.