ADVERTISEMENT

ಯುವ ಬರಹಗಾರರಿಗೆ ಸ್ಫೂರ್ತಿಯಾಗಲಿ:ಹಿಚ್ಕಡ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:28 IST
Last Updated 11 ಡಿಸೆಂಬರ್ 2013, 6:28 IST

ಅಂಕೋಲಾ: ‘ಸಾಹಿತಿ ವಿಷ್ಣು ನಾಯ್ಕ ಅವರು ಯುವ ಬರಹಗಾರರನ್ನು ಬೆಳೆಸುವುದರ ಜೊತೆಗೆ ಸ್ಫೂರ್ತಿದಾಯಕರಾಗಿದ್ದಾರೆ.  ಹಾಲಕ್ಕಿ ಕೊಪ್ಪದಲ್ಲಿಯೇ ಆಡಿ ಬೆಳೆದ ಇವರು ತಮ್ಮ ಕೃತಿಯಲ್ಲಿ ಹಾಲಕ್ಕಿ ಸಮುದಾಯದ ಬದುಕು, ಬರಹ  ಹಾಗೂ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಅಭಿಪ್ರಾಯಪಟ್ಟರು.

ಅಂಬಾರಕೊಡ್ಲದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಾಹಿತಿ ವಿಷ್ಣು ನಾಯ್ಕ ಬರೆದ ‘ಹಾಲಕ್ಕಿಗಳು:  ಒಂದು ಅಧ್ಯಯನ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘23 ಅಧ್ಯಾಯಗಳಲ್ಲಿ  ರೂಪುಗೊಂಡಿರುವ ಈ ಕೃತಿ 23 ಆಕರ ಗ್ರಂಥಗಳ ಅಧ್ಯಯನದೊಂದಿಗೆ ನೈಜ ಚಿತ್ರಣ ಮೂಡಿಬಂದಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಸ್ತನ್ನು  ರೂಢಿಸಿಕೊಂಡ ಸಾಹಿತಿಗಳಲ್ಲಿ ವಿಷ್ಣು ನಾಯ್ಕ ಅವರು ಅಗ್ರ ಸ್ಥಾನ ಪಡೆದಿದ್ದಾರೆ. ಇವರ ಬದುಕೇ ಒಂದು ಕಾವ್ಯದಂತಿದೆ. ತಮ್ಮ ಮನೆಯಲ್ಲಿಯೇ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ಆರಂಭಿಸಿ ಮಾದರಿಯಾಗಿದ್ದಾರೆ’ ಎಂದರು.

ಕಲಾವಿದ ಶಶಿ ಸಾಲಿ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ರೋಹಿದಾಸ ನಾಯಕ, ರಮಾನಂದ ನಾಯಕ, ಜಾನಪದ ಕಲಾವಿದೆ ಸುಕ್ರಿ ಗೌಡ ಮಾತನಾಡಿದರು. ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ‘ವಿದ್ಯಾರ್ಥಿಗಳು ಮತ್ತು ಆಸಕ್ತಿಯುಳ್ಳವರು ನಮ್ಮ  ಮನೆಯಲ್ಲಿರುವ ಗ್ರಂಥಾಲಯವನ್ನು ಮುಕ್ತವಾಗಿ ಬಳಸಿಕೊಳ್ಳಬಹುದಾಗಿದೆ’ ಎಂದರು. ಕನ್ನಡ ಸಾಹಿತ್ಯ ಪರಿಷತ್‌ನ ಕಾರವಾರ ಘಟಕದ ಅಧ್ಯಕ್ಷ ರಾಮ ನಾಯ್ಕ ನಿರೂಪಿಸಿದರು. ಉಮೇಶ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.