ADVERTISEMENT

ರಕ್ತದಾನ ಮಾಡಿ ಜೀವ ಉಳಿಸಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 4:40 IST
Last Updated 23 ಸೆಪ್ಟೆಂಬರ್ 2011, 4:40 IST

ಶಿರಸಿ: `ಜೀವದಾನಕ್ಕೆ ಸುಲಭ ಸರಳ ಆರೋಗ್ಯಕರ ವಿಧಾನ ರಕ್ತದಾನ~, `ಇನ್ನೊಬ್ಬರ ಜೀವ ನಿಮ್ಮ ಕೈಯಲ್ಲಿದೆ~ ಎನ್ನುವ ಸಂದೇಶ ಸಾರುತ್ತ ಕಾಲೇಜ್ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಜಾಥಾ ನಡೆಸಿದರು.

ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಜಾಗೃತಿ ಜಾಥಾಕ್ಕೆ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಂಚರಿಸಿ ರಕ್ತದಾನದ ಕುರಿತು ಮಹತ್ವ ತಿಳಿಸಿತು. ಒಂದು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 3161 ಯುನಿಟ್ ರಕ್ತ ಸಂಗ್ರಹ ಮಾಡಲಾಗಿದ್ದು, 1411 ಯುನಿಟ್ ರಕ್ತವನ್ನು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಮೂಲಕ ಸಂಗ್ರಹಿಸಲಾಗಿದೆ.
 
ಸ್ವಯಂ ಪ್ರೇರಿತ ರಕ್ತದಾನಿಗಳಿಂದ ರಕ್ತ ಸಂಗ್ರಹಣೆ ಅತ್ಯಂತ ಸುರಕ್ಷಿತವಾಗಿರುವುದರಿಂದ ಈ ರಕ್ತದಾನ ಶಿಬಿರಗಳ ಮೂಲಕ ಹೆಚ್ಚು ರಕ್ತ ಸಂಗ್ರಹಕ್ಕೆ ಪ್ರಯತ್ನಿಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಬಹುದಾಗಿದೆ ಎಂಬ ಕುರಿತು ಕಾಲೇಜ್ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ವಿದ್ಯಾದಾನ, ಅನ್ನ ದಾನ ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠವಾಗಿದೆ. ಮಾನವ ಕಂಡುಹಿಡಿದ ಅದ್ಭುತ ಸಂಶೋಧನೆಗಳಲ್ಲಿ ರಕ್ತದಾನದ ಮೂಲಕ ಜೀವ ಉಳಿಸುವಿಕೆ ಮಹತ್ವದ್ದಾಗಿದೆ. ಯುವ ಜನತೆ ವರ್ಷಕ್ಕೆ 2-3 ಬಾರಿಯಾದರೂ ರಕ್ತದಾನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಅವರು ರಕ್ತದಾನದ ಮಹತ್ವ ಕುರಿತು ಭಿತ್ತಿ ಫಲಕ ಅನಾವರಣಗೊಳಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ನಗರಸಭೆ ಅಧ್ಯಕ್ಷ ರವಿ ಚಂದಾವರ, ಜಿಲ್ಲಾ ಆರೋಗ್ಯಾಧಿಕಾರಿ ಗಣೇಶ ಜಿ.ಎಚ್., ಡಾ.ಜಿ.ಎನ್. ಅಶೋಕಕುಮಾರ, ಸಹಾಯಕ ಆಯುಕ್ತ ಗೌತಮ ಬಾಗಡಿ, ತಹಸೀಲ್ದಾರ ಎಚ್.ಕೆ.ಕೃಷ್ಣಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ಮಹಾಬಲೇಶ್ವರ ಹೆಗಡೆ, ಪಂಡಿತ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಸ್ತ್ರದ, ಡಾ. ದಿನೇಶ ಹೆಗಡೆ, ಡಾ.ಸುಮನಾ ಹೆಗಡೆ ಮತ್ತಿತರರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.