ಸಿದ್ದಾಪುರ: ರಸ್ತೆಗಳ ದುರಸ್ತಿ ಅಥವಾ ಅಗಲೀಕರಣ ನಡೆದಾಗ ನೂರಾರು ದೂರವಾಣಿಗಳು ಸ್ತಬ್ಧವಾಗುವ ಸಮಸ್ಯೆ ಆಗಾಗ ಪಟ್ಟಣದಲ್ಲಿ ನಡೆಯುತ್ತಲೇ ಇರುತ್ತದೆ.
ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಅಕ್ಕ-ಪಕ್ಕ ದುರಸ್ತಿ ಮತ್ತು ಅಗಲೀಕರಣ ಪ್ರಕ್ರಿಯೆ ಈಗ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು ಸುಮಾರು ಮುನ್ನೂರಕ್ಕೂ ಅಧಿಕ ದೂರವಾಣಿಗಳಿಗೆ ಮತ್ತೆ ತೊಂದರೆ ಉಂಟಾಗಿದೆ.
ಕೆಲವು ದೂರವಾಣಿಗಳನ್ನು ಸರಿಪಡಿಸುತ್ತಿದ್ದಂತೆ ಮತ್ತೊಂದಿಷ್ಟು ಹಾಳಾಗುತ್ತಿವೆ. ಇದರಿಂದ ಇಂಟರ್‌ನೆಟ್ ಸಂಪರ್ಕ ಹೊಂದಿರುವ ಸಾರ್ವಜನಿಕರ ಸಂಪರ್ಕ ಸೇತುವೆಯೇ ಮುರಿದು ಬಿದ್ದಂತಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜನಿಯರ್ ಎ.ಬಿ.ಎನ್.ರೆಡ್ಡಿ ಅವರನ್ನು ಸಂಪರ್ಕಿಸಿದಾಗ, `ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯ ಎರಡೂ ಕಡೆಗಳಲ್ಲಿ ಮಣ್ಣು ತೆಗೆದು ಮತ್ತೆ ಗೊಚ್ಚು (ಗಟ್ಟಿ) ಮಣ್ಣು ಹಾಕಲಾಗುತ್ತಿದೆ.
ಕಾಮಗಾರಿ ನಡೆದ ಜಾಗದಲ್ಲಿ ಡಾಂಬರು ಹಾಕುವ ಯೋಜನೆ ಇದರಲ್ಲಿ ಇಲ್ಲ. ಆದರೂ ಎರಡು ಕಡೆಗಳಲ್ಲಿ ( ಜಿ.ಪಂ. ಕಚೇರಿ ಕ್ರಾಸ್ ಮತ್ತು ಕೆಳಗಿನ ಪೆಟ್ರೋಲ್ ಬಂಕ್ ಸಮೀಪ) ಡಾಂಬರು ಹಾಕಲಾಗುತ್ತದೆ. ದೂರವಾಣಿ ಸಿಬ್ಬಂದಿ ಕೇಬಲ್‌ಗಳನ್ನು ದುರಸ್ತಿ ಮಾಡಲಿದ್ದಾರೆ. ನಾವು ಕೂಡ ಅವರ ಸಂಪರ್ಕದಲ್ಲಿದ್ದೇವೆ~ ಎನ್ನುತ್ತಾರೆ.
`ರಸ್ತೆಗಳನ್ನು ಆಗಾಗ ದುರಸ್ತಿ ಮಾಡುತ್ತಿರುವುದರಿಂದ ಕೇಬಲ್‌ಗಳು ಮೇಲೆ ಬಂದಿವೆ. ಜೆಸಿಬಿಯಲ್ಲಿ ಈ ಕೆಲಸ ನಡೆಯುತ್ತಿರುವುದರಿಂದ ಕೇಬಲ್‌ಗಳನ್ನು ಕತ್ತರಿಸದಂತೆ ಕಾಯುವುದು ಕಷ್ಟ. ಆದರೂ ನಮ್ಮ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಹೆಚ್ಚಿನ ಕೇಬಲ್‌ಗಳನ್ನು ಕತ್ತರಿಸದಂತೆ ನೋಡುತ್ತಿದ್ದಾರೆ. ಹಾಳಾಗಿರುವ ದೂರವಾಣಿಗಳನ್ನು ಆದಷ್ಟು ಶೀಘ್ರ ಸರಿಪಡಿಸುತ್ತೇವೆ~ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೇಳಿದರು.
ಎರಡೂ ಇಲಾಖೆಗಳ ಕಾರ್ಯವೈಖರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.