ADVERTISEMENT

ವಿಚಾರವಾದದಿಂದ ಎಲ್ಲವನ್ನೂ ಗ್ರಹಿಸಿದ ಗೌರೀಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 6:35 IST
Last Updated 13 ಸೆಪ್ಟೆಂಬರ್ 2011, 6:35 IST

ಕುಮಟಾ: ಕಾವ್ಯದಲ್ಲಿ ಬೇಂದ್ರೆಯವರು ಶಬ್ದ ಪ್ರಯೋಗ ಮಾಡಿದಂತೆ ಗದ್ಯದಲ್ಲಿ ಗೌರೀಶ ಕಾಯ್ಕಿಣಿ ವಿವಿಧ ಬಗೆಯ ಶಬ್ದ ಪ್ರಯೋಗ ಮಾಡಿ ಗಮನ ಸೆಳೆದಿರುವುದು ವಿಶೇಷ ಎಂದು ಕವಿ ಚೆನ್ನವೀರ ಕಣವಿ ತಿಳಿಸಿದರು.

ಕಮಟಾ ತಾಲ್ಲೂಕಿನ ಗೋಕರ್ಣದಲ್ಲಿ ಸೋಮವಾರ ನಡೆದ ಗೌರೀಶ ಕಾಯ್ಕಿಣಿ ಜನ್ಮಶತಾಬ್ದಿ ಆರಂಭೋತ್ಸವದಲ್ಲಿ  ಡಾ. ಎಂ.ಜಿ.ಹೆಗಡೆ ಸಂಪಾದಿಸಿದ  ಗೌರೀಶರ ಬಗ್ಗೆ ಬರೆದ ಬರಹಗಳ ಸಂಗ್ರಹ `ಕಟಾಂಜನ~ ಕೃತಿ ಬಿಡುಗಡೆಗೊಳಿಸಿ  ಅವರು ಮಾತನಾಡಿದರು.

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ, `ಗೌರೀಶರ ವಿಶಾಲ ಓದು ಅಚ್ಚರಿಯ ಸಂಗತಿ. ತಾನು ನಾಸ್ತಿಕ ಎನ್ನುವುದು ಅವರ ಅನೇಕ ಬರೆವಣಿಗೆಯಲ್ಲಿದೆ. ವಿಚಾರವಾದದ ಮೂಲಕವೇ ಎಲ್ಲವನ್ನೂ ಗ್ರಹಿಸಬಹುದು ಎನ್ನುವುದು ಅವರ ನಿಲುವಾಗಿತ್ತು. ತಮ್ಮ `ಪಶ್ಚಿಮದ ಪ್ರತಿಭೆ~, `ಸತ್ಯಾರ್ಥಿ~ ಕೃತಿಗಳು ಪ್ರಪಂಚದ ಅನೇಕ ಸಂಗತಿಗಳನ್ನು ಗೌರೀಶರು ಕನ್ನಡಕ್ಕೆ ಪರಿಚಯಿಸಿದರು.
 
ಗೋಕರ್ಣದ ಮಹಾಬಲೇಶ್ವರನ ಹತ್ತಿರ ಕೂತು ಗೌರೀಶರು ದೇವರಿಲ್ಲ ಎಂದವರು.  ಗೋಕರ್ಣದ ತೀರದ ಉಸುಕಿನಲ್ಲಿ ತಲೆ ಹುದುಗಿಸಿಕೊಂಡು ಬರೆದವನು  ತಾನು  ಎಂದು ತಮ್ಮನ್ನೇ  ಕರೆದುಕೊಂಡರು~ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕವಿ ವಿಷ್ಣು ನಾಯ್ಕ, `ಗೌರೀಶರ ಓದು ಒಂದು ಪ್ರಪಂಚ ಪ್ರದಕ್ಷಿಣೆಯಾಗುತ್ತದೆ. ಗೌರೀಶರು ಬರೆದ 2000ಕ್ಕೂ ಅಧಿಕ ಲೇಖನಗಳಿದ್ದು,  ಅವುಗಳಲ್ಲಿ 300 ಮಾತ್ರ ಮುದ್ರಣಗೊಂಡಿವೆ. 

ಗೌರೀಶರ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಗೆ ಮೊದಲೇ ರಾಜ್ಯ ಹಾಗೂ ರಾಜ್ಯದ ಹೊರಗಡೆ ವಿವಿಧೆಡೆ ಅವರ ಅನೇಕ ಕಾರ್ಯಕ್ರಮಗಳು ಆಗಲೇ ನಿಗದಿಯಾಗಿವೆ~ ಎಂದರು.ಬರಹಗಾರ ವಿ. ಜೆ. ನಾಯಕ, ` ನಮ್ಮ ಜೀವಿತಾವಧಿಯಲ್ಲಿ ಈ ಪ್ರದೇಶದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಹಾಗೂ ದಿನಕರ ದೇಸಾಯಿ ನೇತೃತ್ವದ ರೈತರ ಚಳವಳಿಯಲ್ಲಿ ನಾವಿಬ್ಬರೂ ಪಾಲ್ಗೊಂಡಿದ್ದೆವು~ ಎಂದು ಗೌರೀಶ ಕಾಯ್ಕಿಣಿ ಅವರೊಂದಿಗಿನ ಒಡನಾಟ ಮೆಲುಕು ಹಾಕಿದರು.

ಗೌರೀಶರ ಬಗ್ಗೆ ಬರೆದ ಬರಹಗಳ ಸಂಗ್ರಹ `ಕಟಾಂಜನ~ ಸಂಪಾದಿಸಿದ ಡಾ. ಎಂ ಜಿ ಹೆಗಡೆ, `ಗೌರೀಶರನ್ನು ಅನೇಕರು ಅನೇಕ ಚೌಕಟ್ಟುಗಳಿಂದ ನೋಡಿದ್ದಾರೆ. ಎಲ್ಲ ಚೌಕಟ್ಟು ಸೇರಿದಾಗ ಒಂದು `ಕಟಾಂಜನ~ ವಾಗುತ್ತದೆ~ ಎಂದರು.

ಜಯಂತ ಕಾಯ್ಕಿಣಿ ನಿರೂಪಿಸಿದರು. ಇದೇ ಸಂದರ್ಭದ್ಲ್ಲಲಿ  ಶ್ರೀಪಾದ ಭಟ್ಟ ತಂಡದವರು ಗೌರೀಶರ ಗೀತ ರೂಪಕ  `ವರ್ಷಾಗಮನ~ ಪ್ರಸ್ತುತಪಡಿಸಿದರು.ರೇಷ್ಮಾ ಭಟ್ಟ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಜೋತ್ಸ್ನಾ ಕಾಮತ್, ಡಾ. ಎನ್.ಆರ್. ನಾಯಕ, `ಸಂಕಲ್ಪ~  ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, 

ಬರಹಗಾರರಾದ ಮೋಹನ ಹಬ್ಬು, ಶಾಂತಾರಾಂ ಹಿಚಕಡ,  ಡಾ. ನಾಗರಾಜ ಬಿಳಿಗೋಡ, ಜಿ.ಪಂ. ಸದಸ್ಯ ಪ್ರದೀಪ ನಾಯಕ, ರಂಗಕರ್ಮಿ ಕಿರಣ ಭಟ್ಟ, ರಂಗ ನಟ ಅನಂತ ನಾಯ್ಕ, ಕಲಾವಿದ ದಾಮೋದರ ನಾಯ್ಕ,  ಪತ್ರಕರ್ತರಾದ ಶ್ರೀಧರ ಅಡಿ,  ಕೃಷ್ಣಮೂರ್ತಿ ಹೆಬ್ಬಾರ, ನಾಗರಾಜ ದೇವತೆ, ಜಯರಾಂ ಹೆಗಡೆ ಹಾಗೂ ಜಿ. ಕೆ. ಭಟ್ಟ ಹೊಸ್ಮನೆ, ತಾ.ಪಂ. ಸದಸ್ಯೆ ಭಾರತಿ ದೇವತೆ, ಜಿ.ವಿ. ಹೆಗಡೆ,  ಅಂಕಿತ ಪ್ರಕಾಶನ ಪ್ರಕಾಶ, ಪ್ರಾಧ್ಯಾಪಕ ಡಾ. ಸಿದ್ದಲಿಂಗ ಸ್ವಾಮಿ ವಸ್ತ್ರದ, ಬರಹಗಾರರಾದ ಸುಬ್ಬಲಕ್ಷ್ಮಿ ಕೊಡ್ಲಕೆರೆ, ಅರವಿಂದ ಕರ್ಕಿಕೋಡಿ, ನಾರಾಯಣ ಕಾಗಾಲ ಹಾಗೂ ಸ್ಮಿತಾ ಕಾಯ್ಕಿಣಿ ಮೊದಲಾದವರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.