ADVERTISEMENT

‘ವೇದ-ಸಂಸ್ಕೃತ ಸನಾತನ ಸಂಸ್ಕೃತಿಯ ಮೂಲ ಬೇರು’

ವಸಂತ-ವೇದ ಶಿಬಿರದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಮೇ 2018, 12:29 IST
Last Updated 7 ಮೇ 2018, 12:29 IST

ಯಲ್ಲಾಪುರ : ಮಕ್ಕಳಿಗೆ ಆಧುನಿಕ ಶಿಕ್ಷಣ ಕೊಡಿಸಿದ ಪರಿಣಾಮ ಹವ್ಯಕ ಸಮಾಜದ ಬಹುತೇಕ ಮನೆಗಳು ಇಂದು ವೃದ್ಧಾಶ್ರಮಗಳಾಗಿವೆ. ಅಂಥ ಪೋಷಕರು ವೃದ್ಧಾಪ್ಯ ಸ್ಥಿತಿಯಲ್ಲಿ ಸಹಾಯಕರಿಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.

ಪಟ್ಟಣದ ನಾಯಕನಕೆರೆಯ ಶಾರದಾಂಬಾ ದೇವಸ್ಥಾನ ಆವರಣದಲ್ಲಿರುವ ಶಾರದಾಂಬಾ ವೇದ-ಸಂಸ್ಕೃತ ಪಾಠಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸಂತ-ವೇದ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ  ಮಾತನಾಡಿದರು.

ವೇದ ಮತ್ತು ಸಂಸ್ಕೃತ ಓದಿದ ವಿದ್ಯಾರ್ಥಿಗಳು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗಿಂತಲೂ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಒಂದೇ ಮಗು ಹೊಂದಿರುವ ಪಾಲಕರೂ ವೇದ, ಸಂಸ್ಕೃತ ಅಧ್ಯಯನ ಮಾಡಿಸುವ ಮೂಲಕ ತಮ್ಮ ಬಳಿ ಮಕ್ಕಳನ್ನು ಉಳಿಸಿಕೊಳ್ಳಬಹುದು ಎಂದರು.

ADVERTISEMENT

ವಿದ್ವಾನ್ ಶಿವರಾಮ ಭಟ್ಟ ಮೊಟ್ಟೆಗದ್ದೆ ಉಪನ್ಯಾಸ ನೀಡಿ, ‘ನಮ್ಮ ಪರಂಪರೆಯಿಂದ ಬಂದ ವೇದ-ಸಂಸ್ಕೃತವು ಸುಸಂಸ್ಕೃತ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ವೇದದಿಂದ ಜ್ಞಾನ, ಸಂಸ್ಕೃತದಿಂದ ದೃಷ್ಟಿ ಲಭಿಸುತ್ತದೆ. ಇಂತಹ ಶಿಬಿರಗಳು ಯುವಕರಿಗೆ ಉತ್ತಮ ಬದುಕು ರೂಪಿಸುತ್ತವೆ. ಭಾರತದ ಸಂಸ್ಕೃತಿ ವಿಶ್ವಮಾನ್ಯತೆ ಗಳಿಸಿದೆ. ಗೀತೆ, ಭಾರತ, ರಾಮಾಯಣದಂಥ ಗ್ರಂಥಗಳನ್ನು ಹೆಚ್ಚು ಓದಿದಂತೆ ಹೊಸ ಹೊಸ ಚಿಂತನೆಗಳು ಲಭಿಸುತ್ತವೆ. ಆದರೆ, ನಾವಿಂದು ಮೆಕಾಲೆ ಶಿಕ್ಷಣಕ್ಕೆ ಮಾರುಹೋಗಿ ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ವೇದ-ಸಂಸ್ಕೃತ ಸನಾತನ ಸಂಸ್ಕೃತಿಯ ಮೂಲ ಬೇರು ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ನರಸಿಂಹಮೂರ್ತಿ ಭಟ್ಟ, ಮುಖ್ಯಾಧ್ಯಾಪಕ ವಿ.ಎಸ್.ಭಟ್ಟ ಮಾತನಾಡಿದರು. ಶಿಬಿರದ ಸಂಯೋಜಕ, ಅಧ್ಯಾಪಕ ವಿದ್ವಾನ್ ಶಿವರಾಮ ಭಾಗ್ವತ ಶಿಬಿರದಲ್ಲಿ ನಡೆದ ಚಟುವಟಿಕೆಗಳ ವರದಿ ನೀಡಿದರು.

ಶಿಬಿರದ ಅಧ್ಯಾಪಕ ಪ್ರಸನ್ನ ಭಟ್ಟ ಮಾವಿನಗದ್ದೆ, ಅಜಯ್ ಹೆಗಡೆ, ತೇಜಸ್ ಭಟ್ಟ, ಶ್ರೀಧರ ಹೆಗಡೆ, ನಾಗವೇಣಿ ಭಟ್ಟ ಮಾತನಾಡಿದರು. ಶಿಬಿರ ಶಿಕ್ಷಕರಾದ ಶಶಾಂಕ ಭಟ್ಟ, ನಂದನ ಭಟ್ಟ, ಪ್ರಸನ್ನ ಭಟ್ಟ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.