ADVERTISEMENT

ಶಿರಸಿ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:05 IST
Last Updated 7 ಫೆಬ್ರುವರಿ 2012, 9:05 IST

ಶಿರಸಿ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಗರದ ಹುಬ್ಬಳ್ಳಿ ರಸ್ತೆ ಯಲ್ಲಿರುವ ಭತ್ತ ಸಂಗ್ರಹಣಾ ಕೇಂದ್ರದಲ್ಲಿ ಬೆಂಬಲಬೆಲೆ ಭತ್ತ ಖರೀದಿ ಪ್ರಾರಂಭಿಸಿದೆ.

ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಕೃಷಿ ಅಧಿಕಾರಿ ಶಿವಪ್ರಸಾದ ಗಾಂವಕರ ಆಹಾರ ನಿಗಮ ನೀಡಿರುವ ವಿವರವನ್ನು ಸಭೆಗೆ ತಿಳಿಸಿದರು. ಉತ್ತಮ ಗುಣಮಟ್ಟದ ಒಣಗಿದ ಸಾಮಾನ್ಯ ಭತ್ತ ಒಂದು ಕ್ವಿಂಟಾಲ್‌ಗೆ ರೂ.1080, ಎ ಗ್ರೇಡ್ ಭತ್ತ ಕ್ವಿಂಟಾಲ್‌ಗೆ ರೂ. 1110ಕ್ಕೆ ಖರೀದಿಸಲಾಗುತ್ತಿದೆ. ರೈತರಿಂದ ಮಾತ್ರ ಭತ್ತ ಖರೀದಿಸಲಾಗುತ್ತಿದ್ದು, ಮಧ್ಯವರ್ತಿಗಳು, ಏಜೆಂಟರಿಗೆ ಮಾರಾಟಕ್ಕೆ ಅವಕಾಶವಿಲ್ಲ. ರೈತರ ಅನುಕೂಲಕ್ಕಾಗಿ ತೆರೆದಿರುವ ಖರೀದಿ ಕೇಂದ್ರಕ್ಕೆ ರೈತರು ನೇರವಾಗಿ ಬಂದು ಭತ್ತ ಮಾರಾಟ ಮಾಡಬಹುದು ಎಂದು  ತಿಳಿಸಿದರು. 

ಬಂಡಲ-ಕಂಚೀಕೈ ರಸ್ತೆಯ 700ಮೀಟರ್ ಕಾಮಗಾರಿಗೆ ರೂ.32ಲಕ್ಷ ಯೋಜನಾ ವೆಚ್ಚ ಇದ್ದು, ರಸ್ತೆ ನಿರ್ಮಿಸಿ ಕೆಲವೇ ದಿನಗಳಲ್ಲಿ ಸಂಪೂರ್ಣ ಹಾಳಾಗಿದೆ. ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದಾಗ ಇಲಾಖೆ ಮರು ಡಾಂಬರೀಕರಣ ಮಾಡುವ ಭರವಸೆ ನೀಡಿತ್ತು. ಆದರೆ ಅನೇಕ ಬಾರಿ ಹೇಳಿದ ನಂತರ ಈಗ ಅಲ್ಲಲ್ಲಿ ತೇಪೆ ಹಚ್ಚಿ ಸಾರ್ವಜನಿಕರ ಕಣ್ಣೊರೆಸಲಾಗಿದೆ ಎಂದು ಸದಸ್ಯ ಸಂತೋಷ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಗುತ್ತಿಗೆದಾರ ನಿಗದಿತ ಮೊತ್ತಕ್ಕಿಂತ ಕಡಿಮೆ ಟೆಂಡರ್ ಹಾಕಿದ್ದರು ಎಂದರು. ~ಗುತ್ತಿಗೆದಾರರ ಗುತ್ತಿಗೆ ಹಣ, ಕಾಮಗಾರಿ ನಮಗೆ ಸಂಬಂಧಿಸಿದ್ದಲ್ಲ. ನಮಗೆ ಗುಣಮಟ್ಟದ ರಸ್ತೆ ಬೇಕು. ನಾವು ಇಲಾಖೆಯನ್ನು ಪ್ರಶ್ನಿಸುತ್ತೇವೆ~ ಎಂದು ಸಂತೋಷಗೌಡ ಮರು ಉತ್ತರ ನೀಡಿದರು. ಅಂತಿಮವಾಗಿ ಅಧಿಕಾರಿ ರಸ್ತೆ ಸರಿಪಡಿಸುವ ಭರವಸೆ ನೀಡಿದರು.

ಪ್ಯಾಕೇಜ್ ಕಾಮಗಾರಿ ಗುತ್ತಿಗೆಯಿಂದ ಕಾಮಗಾರಿ ವಿಳಂಬ ಆಗುತ್ತಿದೆ. ಗುತ್ತಿಗೆದಾರರು ಆದ್ಯತೆ ಮೇಲೆ ಕೆಲಸ ಮಾಡುತ್ತಿಲ್ಲ. ಕಕ್ಕಳ್ಳಿ ರಸ್ತೆ ಅರ್ಧ ಕಾಮಗಾರಿಯಿಂದ ಜನರಿಗೆ ಅನಾನುಕೂಲ ವಾಗುತ್ತಿದೆ ಎಂದು ಅನೇಕ ಬಾರಿ ಹೇಳಿದರೂ ಪ್ರಯೋಜನ ಆಗಿಲ್ಲ ಎಂದು ಸದಸ್ಯ ದತ್ತಾತ್ರೇಯ ವೈದ್ಯ ಹೇಳಿದರು.

ಪ್ಯಾಕೇಜ್ ಟೆಂಡರ್ ಪದ್ಧತಿ ಬಿಟ್ಟು ಸಿಂಗಲ್ ಟೆಂಡರ್ ವ್ಯವಸ್ಥೆ ಜಾರಿಗೊಳಿಸುವಂತೆ ವಿನಂತಿಸಲು ಸಭೆ ನಿರ್ಣಯಿಸಿತು. ಮಾರ್ಚ್ ಕೊನೆಯ ಒಳಗೆ ಸರ್ಕಾರದಿಂದ ಬಿಡುಗಡೆಯಾದ ಹಣದ ಕಾಮಗಾರಿ ಪೂರ್ಣಗೊಳ್ಳಬೇಕು. ಯಾವದೇ ಕಾಮಗಾರಿ ವಿಳಂಬ ಆಗಿ ಹಣ ವಾಪಸ್ ಆಗದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷೆ ಸುಮಂಗಲಾ ಭಟ್ಟ ಅಧಿಕಾರಿಗಳಿಗೆ ಆದೇಶಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯ ಹಾಗೂ ನವಜಾತ ಶಿಶುವಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಮಾಡಲಾಗುವುದು. ತಾಲ್ಲೂಕು ಸಮಿತಿ ವೆಚ್ಚ ಭರಿಸಿ ಜಿಲ್ಲಾ ಸಮಿತಿಗೆ ವರದಿ ಸಲ್ಲಿಸುತ್ತದೆ ಎಂದು ಆರೋಗ್ಯಾಧಿಕಾರಿ ಹೇಳಿ ದರು.

ಪಶುಸಂಗೋಪನಾ ಇಲಾಖೆ ಒಂದು ನೂರು ವರ್ಷ ಪೂರೈಸಿದ್ದು, ಇದೇ 18ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವೈದ್ಯಾಧಿಕಾರಿ ಡಾ.ದಿವಾಕರ ಭಟ್ಟ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.