ADVERTISEMENT

ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಆಕ್ರೋಶ

ತಾ.ಪಂ. ಕೆಡಿಪಿ ಸಭೆ; ಹೆಸ್ಕಾಂ ವಿರುದ್ಧ ಶಾಸಕ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:45 IST
Last Updated 13 ಜೂನ್ 2018, 11:45 IST

ಮುಂಡಗೋಡ: ‘ತಾಲ್ಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿದಿದ್ದು, ಪ್ರಗತಿ ತರುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಫಲರಾಗಿದ್ದಾರೆ. ಕಳೆದ ಸಾಲಿನಲ್ಲಿ ಫಲಿತಾಂಶ ಕಡಿಮೆಯಾಗಲು ಬಿಇಒ ನೇರ ಹೊಣೆ ಹೊರಬೇಕಾಗುತ್ತದೆ. ಅಧಿಕಾರಿ ತಿದ್ದಿಕೊಂಡರೆ ಉತ್ತಮ. ಇಲ್ಲವಾದರೆ ನಾನೇ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಎಚ್ಚರಿಕೆ ನೀಡಿದರು.

ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಶಿಕ್ಷಣದ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.

‘ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಿಗೆ ಬುಧವಾರದಿಂದ ಬಿಇಒ ಭೇಟಿ ನೀಡಿ, ಶಾಲಾಭಿವೃದ್ದಿ ಸದಸ್ಯರು ಹಾಗೂ ಶಿಕ್ಷಕರ ಸಭೆ ನಡೆಸಬೇಕು. ತಾಲ್ಲೂಕಿನಲ್ಲಿ ಬಡತನ ಜಾಸ್ತಿಯಿದೆ, ವಿದ್ಯೆ ಕಡಿಮೆಯಿದೆ. ಸರ್ಕಾರ ನೀಡಿರುವ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗಬೇಕು. ಸಿಆರ್‌ಪಿಗಳು ಪ್ರತಿ ದಿನ ಏನು ಕೆಲಸ ಮಾಡುತ್ತಾರೆ? ನಿಮ್ಮ ಸಿಬ್ಬಂದಿ ಯಾವ ಶಾಲೆಗೆ ಭೇಟಿ ನೀಡುತ್ತಾರೆ ಎಂಬುದನ್ನು ಹೋಗಿ ನೋಡಿ’ ಎಂದು ಖಾರವಾಗಿ ಹೇಳಿದರು.

ADVERTISEMENT

‘ಹುನಗುಂದ ಶಾಲೆಯಲ್ಲಿ ನಾಲ್ಕು ವರ್ಷಗಳಿಂದ ಕಂಪ್ಯೂಟರ್‌ಗಳನ್ನು ಬಳಕೆ ಮಾಡದೇ ಹಾಗೆ ಇಟ್ಟಿದ್ದಾರೆ’ ಎಂದು ಹಿರಿಯ ಮುಖಂಡ ಎಚ್‌.ಎಂ.ನಾಯ್ಕ ಆರೋಪಿಸಿದರು. ಆಗ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ‘ಏನ್ರೀ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ನೀಡ್ತೀರಾ ಇಲ್ಲವೋ, ಪ್ರವಾಸ ಮಾಡಲ್ವಾ? ಕೆಲಸ ಮಾಡಲು ಆಸಕ್ತಿಯಿದ್ದರೆ ಮಾಡಿ. ಇಲ್ಲವಾದರೆ ನಾವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.

ರೈತರನ್ನು ಅಲೆದಾಡಿಸಬೇಡಿ:  ‘ಆಕಸ್ಮಿಕವಾಗಿ ಜಾನುವಾರು ಸತ್ತ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ಅಧಿಕಾರಿಗಳು ರೈತರನ್ನು ಅಲೆದಾಡಿಸ ಬೇಡಿ. ತರಕಾರಿ ಬೆಳೆಯಲು ಆಸಕ್ತಿ ಇರುವ ರೈತರಿಗೆ ಬೀಜಗಳನ್ನು ವಿತರಣೆ ಮಾಡಿ. ಎಲ್ಲದಕ್ಕು ನಿಯಮಾವಳಿ ಮುಂದಿಡು
ವುದು ಬೇಡ’ ಎಂದು ಶಾಸಕರು ಹೇಳಿದರು. ‘ಹೆಸ್ಕಾಂನಲ್ಲಿ ಗುತ್ತಿಗೆದಾರರೇ ಮಾಲೀಕರಾಗಿದ್ದಾರೆ. ಸರ್ಕಾರ ನೂರಾರು ಕೋಟಿ ಅನುದಾನ ನೀಡಿದರೂ ತಾವೇ ಮಾಡಿಸಿದಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು 10 ಕಂಬಗಳನ್ನು ಹಾಕುವಲ್ಲಿ 20 ಕಂಬಗಳನ್ನು ಹಾಕುತ್ತಿದ್ದಾರೆ. ಸಂಸ್ಥೆಯಲ್ಲಿ ದೊಡ್ಡ ಲೂಟಿ ನಡೆಯುತ್ತಿದೆ. ಮುಂದಿನ ವಾರ ಹೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ, ಪಾರದರ್ಶಕ ಕೆಲಸ ನಡೆಯುವಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಸಿಸಿಟಿವಿ ಕ್ಯಾಮೆರಾದಿಂದ ಭಯ!

ತಾಲ್ಲೂಕಿನಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾಗಲು ಕಾರಣವೇನು ಎಂದು ಶಾಸಕರು ಪ್ರಶ್ನಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಮಕ್ಕಳಲ್ಲಿ ಭಯ ಉಂಟಾಗಿ ಉತ್ತರ ಬರೆಯಲು ತೊಂದರೆಯಾಗಿದೆ ಎಂದು ಕೆಲವು ಶಿಕ್ಷಕರು ಹೇಳಿದ್ದಾರೆ ಎಂದು ಬಿಇಒ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.