ADVERTISEMENT

ಸಡಗರದ ಕ್ರಿಸ್‌ಮಸ್‌ಗೆ ಕರಾವಳಿ ಸಜ್ಜು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 9:59 IST
Last Updated 24 ಡಿಸೆಂಬರ್ 2013, 9:59 IST
ಹೈ ಚರ್ಚ್‌ನಲ್ಲಿರುವ ಏಸು ಶಿಲುಬೆ
ಹೈ ಚರ್ಚ್‌ನಲ್ಲಿರುವ ಏಸು ಶಿಲುಬೆ   

ಕಾರವಾರ: ಚುಮು ಚುಮು ಚಳಿಯೊಂದಿಗೆ ಮತ್ತೊಂದು ಕ್ರಿಸ್‌ಮಸ್‌ ಬಂದಿದೆ. ಡಿ. 24ರಂದು ರಾತ್ರಿ ಸಡಗರದ ಕ್ರಿಸ್‌ಮಸ್‌ ಅನ್ನು ಆಚರಿಸಲು ಕರ್ನಾಟಕ ಕಾಶ್ಮೀರ ಎಂದೇ ಹೆಸರಾದ ಕಾರವಾರ ನಗರ ಸಜ್ಜುಗೊಂಡಿದೆ.

ನಗರದಲ್ಲಿ ಸುಮಾರು 400ಕ್ಕೂ ಹೆಚ್ಚು ಕ್ರೈಸ್ತ ಸಮುದಾಯದ ಕುಟುಂಬಗಳಿವೆ. ಹೈ ಚರ್ಚ್ (ಶ್ಲೋಕ ಮಾತೆಯ ದೇವಾಲಯ), ಕ್ಯಾಥಡ್ರಲ್‌ ಚರ್ಚ್‌ ಮುಂತಾದ ಚರ್ಚ್‌ಗಳು ಕ್ರಿಸ್‌ಮಸ್‌ ಆಚರಣೆಗೆ ಸಿದ್ಧವಾಗುತ್ತಿವೆ.

ನಗರದಲ್ಲಿರುವ ಚರ್ಚ್‌ಗಳ ಪೈಕಿ ‘ಹೈ ಚರ್ಚ್‌’ಗೆ ಸುಮಾರು 150 ವರ್ಷಗಳ ಇತಿಹಾಸವಿದೆ. ಈ ಚರ್ಚ್‌ನಲ್ಲಿ ನವೀಕರಣ ಕಾರ್ಯ ಬಿರುಸುನಿಂದ ಸಾಗಿದೆ. ಈಗಾಗಲೇ ಚರ್ಚ್‌ನ ಆವರಣದಲ್ಲಿ ‘ಗೋದಲಿ’ಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಕ್ರೈಸ್ತರ ಮನೆಗಳಲ್ಲಿ ಸಂಭ್ರಮದ ಕ್ರಿಸ್‌ಮಸ್‌ಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಮನೆಗಳಲ್ಲಿ ಗೋದಲಿ ನಿರ್ಮಿಸಿ, ಕ್ರಿಸ್‌ಮಸ್‌ ಟ್ರೀ ಅನ್ನು ತಂದು ಇಡಲಾಗಿದೆ. ಇವುಗಳಿಗೆ ವಿದ್ಯುತ್‌ ದೀಪಾಲಂಕಾರವನ್ನು ಮಾಡಲಾಗಿದೆ. ಗೋದಲಿಯಲ್ಲಿ ಕ್ರಿಸ್ತನು ಹುಟ್ಟಿದಾಗ ಇದ್ದಿರಬಹುದಾದಂತಹ ಗುಡಿಸಲು, ಅಲ್ಲಿನ ಕುರಿಗಳು, ಸಂಭ್ರಮಗಳ ವಾತಾವರಣವನ್ನು ಅನಾವರಣ ಮಾಡಿದ್ದಾರೆ.

ಅಲಂಕಾರಿಕ ನಕ್ಷತ್ರ ದೀಪಗಳನ್ನು ಗೋದಲಿಗಳಲ್ಲಿ, ಮನೆಗಳಲ್ಲಿ, ಚರ್ಚ್‌ಗಳಲ್ಲಿ ಹಾಗೂ ರಸ್ತೆಗಳಲ್ಲಿ ನೇತುಹಾಕಲಾಗಿದೆ.
ವಿಶ್ವದೆಲ್ಲೆಡೆ ಒಂದೇ ರೀತಿಯಾಗಿ ಕ್ರಿಸ್‌ಮಸ್‌ ಆಚರಣೆ ಮಾಡಲಾಗುತ್ತಾದರೂ ಕರಾವಳಿ ಭಾಗದಲ್ಲಿ ಸ್ವಲ್ಪ ವಿಶೇಷವಾಗಿ ಆಚರಿಸಲಾಗುತ್ತದೆ. ಕರಾವಳಿ ಕ್ರೈಸ್ತರು ಕ್ರಿಸ್‌ಮಸ್‌ ವಿಶೇಷವಾಗಿ ‘ಕುಸ್ವಾರ್’ ಎನ್ನುವ ತಿಂಡಿಯನ್ನು ತಯಾರಿಸುತ್ತಾರೆ. ಉಳಿದಂತೆ ಲಾಡು, ಚಕ್ಕುಲಿ, ನವರಿ ಮುಂತಾದ ವಿವಿಧ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿದ್ದಾರೆ.

‘ಕ್ರಿಸ್‌ಮಸ್‌ ನಿಮಿತ್ತ ಮನೆಯಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿದ್ದೇವೆ. ಈ ತಿಂಡಿಗಳನ್ನು ನೆರೆ ಹೊರೆಯ, ಸಂಬಂಧಿಗಳ ಮನೆಗೆ ಹಂಚುವ ಮೂಲಕ ಕ್ರಿಸ್‌ಮಸ್‌ ಅನ್ನು ಸಂಭ್ರಮದಿಂದ ಆಚರಿಸುತ್ತೇವೆ’ ಎನ್ನುತ್ತಾರೆ ಹೈ ಚರ್ಚ್‌ ರಸ್ತೆಯ ನಿವಾಸಿ ಫಿಲೋಮಿನಾ ಡಿಸೋಜಾ.

ಕ್ಯಾರೋಲ್‌ ಗೀತೆ, ವಿಶೇಷ ಪ್ರಾರ್ಥನೆ: ಕ್ರಿಸ್‌ಮಸ್‌ ಮುನ್ನಾ ದಿನವಾದ ಡಿ. 24ರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 12ಗಂಟೆಗೆ ಸರಿಯಾಗಿ ಬಾಲ ಏಸುವಿನ ಪ್ರತಿಮೆಯನ್ನು ಗೋದಲಿಯಲ್ಲಿ ಇಡಲಾಗುತ್ತದೆ. ಅಲ್ಲಿ ನೆರೆದ ಭಕ್ತರಿಂದ ಕ್ಯಾರೋಲ್‌ ಗೀತೆಗಳು ಮೊಳಗುತ್ತದೆ. ಮೇಣದ ಬತ್ತಿ ಹೊತ್ತಿಸಿ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ.

‘ಚರ್ಚ್‌ಗೆ ಡಿ. 24ರ ರಾತ್ರಿ ಕ್ರೈಸ್ತರು ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಚರ್ಚ್‌ಗಳಲ್ಲಿ ಕ್ಯಾಂಡಲ್‌ಗಳನ್ನು ಹಚ್ಚಿ ತಮ್ಮ ಸಮಸ್ಯೆ, ನೋವುಗಳನ್ನು ಸ್ವಾಮಿಯ ಮುಂದೆ ಹೇಳಿಕೊಳ್ಳುತ್ತಾರೆ. ಶಾಂತಿಧೂತ ಏಸು ಕ್ರಿಸ್ತನ ಸಂದೇಶವನ್ನು ಸಾರುತ್ತಾ ವಿಶ್ವಕ್ಕೆ ಶಾಂತಿ ನೀಡಿ ಎಲ್ಲರಿಗೂ ಒಳಿತು ಮಾಡುವಂತೆ ಪ್ರಾರ್ಥಿಸಲಾಗುತ್ತದೆ. ಅಂದು ರಾತ್ರಿ 12ಗಂಟೆಗೆ ಬಲಿಪೂಜೆ ನಡೆಯುತ್ತದೆ’ ಎಂದು ಹೈ ಚರ್ಚ್‌ನ ಫಾದರ್‌ ವಲೆರಿಯನ್‌ ಸಿಕ್ವೇರಾ ‘ಪ್ರಜಾವಾಣಿ’ಗೆ ತಿಳಿಸಿದರು.

ನಕ್ಷತ್ರಕಾರದ ಆಕಾಶಬುಟ್ಟಿಗೆ ಡಿಮ್ಯಾಂಡು: ನಗರದ ಗಿಫ್ಟ್‌ ಮಳಿಗೆಗಳಲ್ಲಿ ನಕ್ಷತ್ರಾಕಾರದ ಆಕಾಶಬುಟ್ಟಿಗಳು, ಕ್ರಿಸ್‌ಮಸ್‌ ಟ್ರೀ, ಸಾಂತಾಕ್ಲಾಸ್‌ನ ಟೋಪಿಗಳು, ಗೊಂಬೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಕ್ರಿಸ್‌ಮಸ್‌ ಹತ್ತಿರವಾಗಿರುವುದರಿಂದ ಆಕಾಶಬುಟ್ಟಿ, ಅಗತ್ಯ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡುತ್ತಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.