ADVERTISEMENT

ಸಣಕಲಾದ ವರದೆ; ಬರಡಾದ ಗದ್ದೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:50 IST
Last Updated 19 ಜುಲೈ 2012, 9:50 IST

ಶಿರಸಿ: ತಾಲ್ಲೂಕಿನ ಪೂರ್ವ ಭಾಗದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಳೆ ಆಶ್ರಿತ ಬೆಳೆಯನ್ನೇ ನಂಬಿರುವ ಬಹುಪಾಲು ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಕಣ್ಣು ಹಾಯಿಸಿದಷ್ಟು ದೂರದವರೆಗೂ ಹಸಿರು ಸಸಿಗಳಿಂದ ಕಂಗೊಳಿಸುವ ಸಹಸ್ರಾರು ಎಕರೆ ಬತ್ತದ ಗದ್ದೆಗಳು ಬರಡಾಗಿ ನಿಂತಿವೆ. ನಿತ್ಯ ಆಕಾಶ ನೋಡುತ್ತ ಮಳೆಯ ನಿರೀಕ್ಷೆಯಲ್ಲಿ ರೈತರು ದಿನ ಲೆಕ್ಕ ಹಾಕುತ್ತಿದ್ದಾರೆ.

ಬನವಾಸಿ ಹೋಬಳಿಯ ಮುಖ್ಯ ಬೆಳೆ ಬತ್ತ. 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯುವ ಈ ಭಾಗದಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಶೇ 5ರಷ್ಟು ಸಹ ಬಿತ್ತನೆ ಆಗಿಲ್ಲ ಎಂಬುದು ರೈತರ ಅಭಿಪ್ರಾಯ. ಜೂನ್ ತಿಂಗಳ ಆರಂಭದಲ್ಲಿ ಬಿತ್ತನೆ ಮಾಡಿದ ಬತ್ತದ ಸಸಿಗಳು ಮೊಳಕೆ ಒಡೆದು ಮೇಲೆ ಬಂದಿದ್ದರೂ ಮಳೆಯ ಕೊರತೆಯಿಂದ ಅವು ದಿನ ಎಣಿಕೆ ಮಾಡುತ್ತಿವೆ. ನಾಟಿ ಮೂಲಕ ಬತ್ತ ಬೆಳೆಯಲು ಅಗೆ ಮಡಿ ಸಸಿಗಳು ಸಿದ್ಧವಾಗಿದ್ದರೂ ಗದ್ದೆಯಲ್ಲಿ ನೀರಿಲ್ಲದೆ ನಾಟಿ ಕಾರ್ಯ ಸಾಧ್ಯವಾಗುತ್ತಿಲ್ಲ. ಮಳೆ ಇಲ್ಲದೆ ಧೃತಿಗೆಟ್ಟ ರೈತರು ಹೂಳದೆ ಹಾಗೆಯೇ ಬಿಟ್ಟ ನೂರಾರು ಎಕರೆ ಗದ್ದೆಗಳು ಕಣ್ಣಿಗೆ ರಾಚುತ್ತವೆ. ಅಲ್ಲೋ ಇಲ್ಲೋ ಎಂಬಂತೆ ಕೆಲ ರೈತರು ಪಂಪ್ ಮೂಲಕ ನೀರು ಹಾಯಿಸಿ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದಾರೆ.

ನಿರಂತರ ಮಳೆಯಾಗುತ್ತಿದ್ದರೆ ಈ ವೇಳೆಯಲ್ಲಿ ಬನವಾಸಿ ಭಾಗದಲ್ಲಿ ಹರಿಯುವ ವರದಾ ನದಿ ಉಕ್ಕಿ ಬತ್ತದ ಗದ್ದೆಗಳು ಜಲಾವೃತವಾಗುತ್ತಿದ್ದವು. ಈ ವರ್ಷ ವರದೆಯೂ ಸಣಕಲಾಗಿದ್ದಾಳೆ, ಗದ್ದೆಗಳು ಒಣಗಿ ನಿಂತಿವೆ. ದುಃಖಿತರಾದ ರೈತರು ಬರಡಾಗಿ ನಿಂತ ಗದ್ದೆಗಳ ಕಡೆ ಮುಖ ಮಾಡುತ್ತಿಲ್ಲ. ಕಳೆದೆರಡು ವರ್ಷಗಳಿಂದ ಬನವಾಸಿ ಭಾಗದ ರೈತರ ಅದೃಷ್ಠ ಸರಿಯಾಗಿಲ್ಲ. ಅತಿವೃಷ್ಠಿ-ಅನಾವೃಷ್ಠಿಯಿಂದ ರೈತರು ಕಂಗೆಟ್ಟಿದ್ದಾರೆ.

ಈ ವರ್ಷದ ಬರಗಾಲದ ಸೂಚನೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬ್ಯಾಂಕ್ ಸಾಲ ತೀರಿಸಲೂ ಸಾಧ್ಯವಾಗದೆ ರೈತರು ಕೈ ಚೆಲ್ಲಿ ಕುಳಿತಿದ್ದಾರೆ. ಶುಂಠಿ, ಅನಾನಸ್ ಈ ಭಾಗದ ಉಪ ಬೆಳೆಗಳಾದರೂ ಹಿಂದಿನ ಸಾಲಿನಲ್ಲಿ ಈ ಬೆಳೆಗೆ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸಿದ್ದಾರೆ.

`ಹಿಂದಿನ ವರ್ಷದ ಶುಂಠಿ ಬೆಲೆ ಕುಸಿತ ಕಂಡು ಶುಂಠಿ ಬೆಳೆಯುವ ಪ್ರದೇಶ ಕಡಿಮೆ ಮಾಡಿದ್ದೇವೆ. ಖಾಲಿ ಇರುವ ಗದ್ದೆಯಲ್ಲಿ ಬತ್ತ ಬೆಳೆಯಲು ನೀರಿಲ್ಲ~ ಎಂಬುದು ರೈತ ರವಿ ನಾಯ್ಕ ಅನುಭವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.