ADVERTISEMENT

ಸಮುದ್ರಕ್ಕೆ ಹಾರಿದ ಕಡವೆಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 11:50 IST
Last Updated 11 ಏಪ್ರಿಲ್ 2017, 11:50 IST

ಕಾರವಾರ: ಬೀದಿನಾಯಿಗಳ ದಾಳಿ­ಯಿಂದ ಹೆದರಿ, ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿದಿದ್ದ ಕಡವೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಮೀನು­ಗಾರರ ಸಹಕಾರದಿಂದ ಸೋಮವಾರ ರಕ್ಷಿಸಿದರು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಿಲ್ಲಾಧಿ­ಕಾರಿ ಬಂಗ್ಲೆ ಇರುವ ಗುಡ್ಡದ ಕಡೆಯಿಂದ ಬಂದ ಸುಮಾರು 3 ವರ್ಷದ ಹೆಣ್ಣು ಕಡವೆಯನ್ನು ಬೀದಿನಾಯಿಗಳು ಬೆನ್ನಟ್ಟಿ­ದವು. ದಿಕ್ಕುತೋಚದೇ ಓಡಿಬಂದ ಅದು ಸಮುದ್ರಕ್ಕೆ ಇಳಿಯಿತು. ಕಡವೆ ಈಜುವುದನ್ನು ನೋಡಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ವಲಯ ಅರಣ್ಯಾಧಿಕಾರಿ ಕೆ.ಡಿ. ನಾಯ್ಕ ಹಾಗೂ ಸಿಬ್ಬಂದಿ ಸುಮಾರು ಅರ್ಧ ತಾಸು ಕಾರ್ಯಾಚರಣೆ ನಡೆಸಿ ಅದನ್ನು ರಕ್ಷಿಸಿದರು.ಈ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದ ಕಡವೆಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಮರಳಿ ಕಾಡಿಗೆ: ‘ಕಡವೆಯನ್ನು ಕಾಜುಬಾಗ್‌ದಲ್ಲಿನ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಇರಿಸಲಾಗಿತ್ತು. ಅದರ ಆರೋಗ್ಯ ಸುಧಾರಿಸಿದ್ದರಿಂದ ತಾಲ್ಲೂಕಿನ  ಮೈಂಗಿಣಿ ಬಳಿ ಸಂಜೆ ಕಾಡಿಗೆ ಬಿಡಲಾಯಿತು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಾಡಿನಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಕಡವೆಗಳು ನಾಡಿನಂಚಿಗೆ ಬರುತ್ತಿವೆ. ಪ್ರಾಣಿಗಳ ಬಾಯಾರಿಕೆ ನೀಗಿಸಲು ಅರಣ್ಯ ವ್ಯಾಪ್ತಿಯಲ್ಲಿ ಕೃತಕ ನೀರಿನ ಹೊಂಡಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.