ADVERTISEMENT

ಸಹಕಾರ ಸಂಸ್ಥೆಗಳಿಂದ ರೈತರ ಕಲ್ಯಾಣ ಆಗಲಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 8:10 IST
Last Updated 25 ಜುಲೈ 2012, 8:10 IST
ಸಹಕಾರ ಸಂಸ್ಥೆಗಳಿಂದ ರೈತರ ಕಲ್ಯಾಣ ಆಗಲಿ
ಸಹಕಾರ ಸಂಸ್ಥೆಗಳಿಂದ ರೈತರ ಕಲ್ಯಾಣ ಆಗಲಿ   

ಶಿರಸಿ: ಹಿರಿಯ ಸಹಕಾರ ಧುರೀಣರಾಗಿದ್ದ ಶ್ರೀಪಾದ ಹೆಗಡೆ ಕಡವೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯ ಶಸ್ತ್ರ ಚಿಕಿತ್ಸಕ ಹುಬ್ಬಳ್ಳಿಯ ಡಾ.ಸುಭಾಷ ಜೋಶಿ ಅವರನ್ನು ಸನ್ಮಾನಿಸಲಾಯಿತು. 

 ಎಸ್.ಆರ್.ಕಡವೆ ಅಭ್ಯುದಯ ಸಂಸ್ಥೆ ಮಂಗಳವಾರ ವಿನಾಯಕ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಆರ್.ವಿ.ದೇಶಪಾಂಡೆ, ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಜೋಶಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜೋಶಿ, `ಪ್ರಸ್ತುತ ಸಮಾಜದಲ್ಲಿ ಸ್ವಾರ್ಥಿಗಳೇ ಹೆಚ್ಚಾಗಿರುವಾಗ ಕಡವೆ ಹೆಗಡೆಯಂತಹ ದೂರದೃಷ್ಟಿಯುಳ್ಳ, ಸಮಾಜಮುಖಿ ವ್ಯಕ್ತಿತ್ವದ ವ್ಯಕ್ತಿಗಳನ್ನು ನೆನಪಿಸಿಕೊಳ್ಳಬೇಕು~ ಎಂದರು. ಕಡವೆ ಹೆಗಡೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಆರ್.ವಿ.ದೇಶಪಾಂಡೆ, `ಕಡವೆ ಹೆಗಡೆ ಅವರಲ್ಲಿದ್ದ ಪ್ರಾಮಾಣಿಕತೆ, ನಿಷ್ಠೆ, ಛಲ, ಅನ್ಯಾಯದ ವಿರುದ್ಧ ಸಂಘರ್ಷದ ಮನೋಪ್ರವೃತ್ತಿ ಇಂದಿನ ರಾಜಕಾರಣಿಗಳಲ್ಲಿ ಇಲ್ಲ~ ಎಂದರು.

`ರೈತಪರ ಧೋರಣೆ ಹೊಂದಿದ್ದ ಕಡವೆ ಹೆಗಡೆ ರೈತರಿಗಾಗಿ ಅನೇಕ ಸಹಕಾರಿ ಸಂಸ್ಥೆಗಳನ್ನು ಹುಟ್ಟುಹಾಕಿದರು. ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳು ರೈತರ ಆರ್ಥಿಕ ಸ್ಥಿತಿ ಬಲಿಷ್ಠಗೊಳಿಸಲು ಶ್ರಮಿಸಬೇಕು. ಸಹಕಾರಿ ಸಂಸ್ಥೆಗಳಿಂದ ರೈತರ ಕಲ್ಯಾಣ ಆಗಬೇಕು~ ಎಂದು ದೇಶಪಾಂಡೆ ಹೇಳಿದರು. 

ಈ ಸಂದರ್ಭದಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಸಹಕಾರಿ ಸೀತಾರಾಮ ಹೆಗಡೆ, ಡಾ.ರಾಜಾರಾಮ ಹೆಗಡೆ ದೊಡ್ಡೂರು, ದಿವಂಗತ ಶ್ರೀಪಾದ ಹೆಗಡೆ ಕಡವೆ ಪತ್ನಿ ನೇತ್ರಾವತಿ ಹೆಗಡೆ, ಕಡವೆ ಅಭ್ಯುದಯ ಸಂಸ್ಥೆ ಅಧ್ಯಕ್ಷ ಶಶಾಂಕ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಶ್ರೀಪಾದ ಹೆಗಡೆ ಸ್ವಾಗತಿಸಿದರು. ದೀಪಕ ದೊಡ್ಡೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.