ADVERTISEMENT

ಸ್ಮಾರ್ಟ್ ಕ್ಲಾಸ್‌ನಲ್ಲಿ ಆಧುನಿಕ ಬೋಧನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 9:34 IST
Last Updated 2 ಜನವರಿ 2014, 9:34 IST

ಸಿದ್ದಾಪುರ: ತಾಲ್ಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಶಿಕ್ಷಣ ಪ್ರಸಾರಕ ಸಮಿತಿ  ತನ್ನ ಪ್ರಾಥಮಿಕ ಶಾಲೆಗಾಗಿ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಿಸಲಾಗಿದೆ. ಸುಮಾರು ₨ 80 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದರಿಂದ ಒಂದೇ ಕಟ್ಟಡದಲ್ಲಿ ಬಾಲವಿಹಾರದಿಂದ ಪ್ರಾಥಮಿಕ ಶಾಲೆಯವರೆಗೆ ಶಿಕ್ಷಣ ಸೌಲಭ್ಯ ದೊರೆಯಲಿದೆ.

ಈ ಕಟ್ಟಡದಲ್ಲಿ 11 ಕೊಠಡಿಗಳಿದ್ದು, 8400 ಚದರ ಅಡಿ ವಿಸ್ತೀರ್ಣ ಹೊಂದಿದೆ. ಪ್ರತ್ಯೇಕ ಶೌಚಾಲಯ, ಗ್ರಂಥಾಲಯ, ಮುಖ್ಯ ಶಿಕ್ಷಕರ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಶಾಲಾ ಕೊಠಡಿಯಲ್ಲಿ ಸ್ಮಾರ್ಟ್ ಕ್ಲಾಸ್‌ನ ಫಲಕ ಅಳವಡಿಸಲಾಗಿದೆ. ಇದರಿಂದ ಮಕ್ಕಳು ಕೇವಲ ಕೇಳುವುದರ ಮೂಲಕವಲ್ಲದೇ ನೋಡುವುದ ರಿಂದಲೂ ಕಲಿಯಲು ಸಾಧ್ಯವಾಗುತ್ತದೆ. ಈ ವಿಧಾನದ ಮೂಲಕ ನೀಡುವ ಶಿಕ್ಷಣ ಹೆಚ್ಚು ಪರಿಣಾಮಕಾರಿ  ಎಂಬುದು ಸಂಸ್ಥೆಯ ಉಪಾಧ್ಯಕ್ಷರ ಹೇಳಿಕೆ.

ಈ ಕಟ್ಟಡದಲ್ಲಿ ಬಾಲವಿಹಾರದ ಮೂರು ಮತ್ತು ಪ್ರಾಥಮಿಕ ಶಾಲೆಯ ಐದು ತರಗತಿಗಳು ನಡೆಯುತ್ತವೆ. ಬಾಲವಿಹಾರದ ಮೂರು ತರಗತಿಗಳಿಗೆ  ಉತ್ತಮ ಅರ್ಹತೆ ಹೊಂದಿರುವ 4 ಮತ್ತು ಪ್ರಾಥಮಿಕ ಶಾಲೆಯ ಐದು ತರಗತಿಗಳಿಗೆ 7  ಶಿಕ್ಷಕರಿದ್ದಾರೆ. ಅವ ರೊಂದಿಗೆ ತಲಾ ಇಬ್ಬರು  ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

‘ದೈಹಿಕ ಶಿಕ್ಷಣ ನೀಡುವುದರೊಂದಿಗೆ ನೃತ್ಯ ಮತ್ತು ಸಂಗೀತ ಮತ್ತಿತರ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಲೂ ಪ್ರಾಮುಖ್ಯ ನೀಡುತ್ತಿದ್ದೇವೆ. ನಮ್ಮದು ಅನುದಾನ ರಹಿತ ಶಾಲೆ. ಆದರೂ ಸುಸಜ್ಜಿತ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ. ಈ ಕಟ್ಟಡದ ಒಂದು ಕೊಠಡಿಗೆ ಎಂಎಲ್‌ಸಿ ಬಸವರಾಜ ಹೊರಟ್ಟಿ ಅವರಿಂದ ಅನುದಾನ ಪಡೆದಿದ್ದು ಬಿಟ್ಟರೆ ಉಳಿದೆಲ್ಲ ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸಿದೆ’ ಎನ್ನುತ್ತಾರೆ ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ.

ಈ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸಭಾಭವನ ನಿರ್ಮಿಸುವ ಯೋಜನೆ ಶಿಕ್ಷಣ ಪ್ರಸಾರಕ ಸಮಿತಿಗಿದೆ. ಈ ಶಾಲಾ ಸಮುಚ್ಚಯದಲ್ಲಿರುವ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸಭಾಭವನದಿಂದ ಕಾರ್ಯಕ್ರಮ ನಡೆಸಲು ಅನುಕೂಲವಾಗಬೇಕು ಎಂಬುದು ಸಂಸ್ಥೆಯ ಆಶಯವಾಗಿದೆ.

ಈ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಇದೇ 3ರಂದು ಬೆಳಿಗ್ಗೆ 10.30ಕ್ಕೆ ವಿಶಿಷ್ಟವಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಮಕ್ಕಳೇ ಉದ್ಘಾಟಕರಾಗಿ, ಅಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಮಿಂಚಲಿದ್ದಾರೆ. ಮಕ್ಕಳಿಗಾಗಿ ಕಟ್ಟಲಾದ ಕಟ್ಟಡದ ಉದ್ಘಾಟನೆಯೂ ಅದೇ ಶಾಲೆಯ ಮಕ್ಕಳಿಂದಲೇ ನೆರವೇರುತ್ತಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT