ADVERTISEMENT

ಹಾಡಲೂ ಆಗದು; ನೃತ್ಯವೂ ನಡೆಯದು!

ನಾಗೇಂದ್ರ ಖಾರ್ವಿ
Published 1 ಅಕ್ಟೋಬರ್ 2012, 6:10 IST
Last Updated 1 ಅಕ್ಟೋಬರ್ 2012, 6:10 IST

ಕಾರವಾರ: ನಗರದ ಟ್ಯಾಗೋರ ಕಡಲ ತೀರದಲ್ಲಿರುವ ಮಯೂರಿ ಸಂಗೀತ, ನೃತ್ಯ ಕಾರಂಜಿ ಶಾಶ್ವತವಾಗಿ ನೃತ್ಯ ನಿಲ್ಲಿಸುವ ಲಕ್ಷಣಗಳು ಗೋಚರವಾಗುತ್ತಿವೆ. ರಾಜ್ಯದ ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿರುವ ಸಂಗೀತ, ನೃತ್ಯ ಕಾರಂಜಿಗಳ ಪೈಕಿ ಇದು ಒಂದಾಗಿದೆ. ಆದರೆ ನಿರ್ವಹಣೆ ಸಮಸ್ಯೆಯಿಂದಾಗಿ ಇತಿಹಾಸದ ಪುಟ ಸೇರುತ್ತಿದೆ.

1998ರಲ್ಲಿ ಮಯೂರಿ ನೃತ್ಯ ಸಂಗೀತ ಕಾರಂಜಿ ಉದ್ಘಾಟನೆಗೊಂಡಿತು. ಅಂದು ಅಬಕಾರಿ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಪಿ.ಎಸ್.ಜೈವಂತ್ ಕಾರಂಜಿಯನ್ನು ಲೋಕಾರ್ಪಣೆ ಮಾಡಿದ್ದರು. ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರ ತಂದೆ ವಸಂತ ಅಸ್ನೋಟಿಕರ್ ಅಂದು ಶಾಸಕರಾಗಿದ್ದರು.

ಮಯೂರಿ ನೃತ್ಯ, ಸಂಗೀತ ಕಾರಂಜಿಯಲ್ಲಿ ನೀರು ಮತ್ತು ಸಂಗೀತದ ಜುಗಲ್‌ಬಂದಿ ನೋಡಿ ಜನ ಪುಳಕಿತಗೊಂಡರು. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕಾರಂಜಿಯ ನೃತ್ಯದ ಸೊಬಗನ್ನು ಆಸ್ವಾದಿಸುತ್ತಿದ್ದರು. ಜಿಲ್ಲೆಯ ಜನರಿಗೆ ಇದು ಹೊಸ ಅನುಭವ ನೀಡಿತ್ತು.

ಆದರೆ ಈ ಸೊಬಗು ಬಹಳದಿನ ಉಳಿಯಲಿಲ್ಲ. ಸಮಸ್ಯೆಗಳು ಒಂದೊಂದಾಗಿ ಕಾಣಲಾರಂಭಿಸಿ ಕೊನೆಗೆ ಕಾರಂಜಿ ನೃತ್ಯ ಮಾಡುವುದನ್ನು ನಿಲ್ಲಿಸಿತು. ಕಳೆದ 6-7 ವರ್ಷಗಳಿಂದ ನೃತ್ಯ ಕಾರಂಜಿ ಹಾಡುತ್ತಿಲ್ಲ. ನೃತ್ಯವನ್ನೂ ಮಾಡುತ್ತಿಲ್ಲ. ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿ ಸಂಗೀತ ಕಾರಂಜಿಯಿದೆ.

ಬಾಲ ಭವನ ಸಮಿತಿಯ ನಿರ್ಲಕ್ಷ್ಯದಿಂದಾಗಿ ನೃತ್ಯ, ಸಂಗೀತ ಕಾರಂಜಿಯ ಸುತ್ತಲೂ ಗಿಡಕಂಟಿಗಳು ಬೆಳೆದಿವೆ. ಕಾರಂಜಿಗೆ ಅಳವಡಿಸಿರುವ ಬಣ್ಣದ ದೀಪಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಕಬ್ಬಿಣದ ಸಲಕರಣೆಗಳಿಗೆ ತುಕ್ಕು ಹಿಡಿದಿದೆ. ಕಾರಂಜಿಯ ನೀರು ಕೊಳೆತು ಕಪ್ಪೆಗಳ ಆಶ್ರಯ ತಾಣವಾಗಿದೆ. ನೃತ್ಯ ವೀಕ್ಷಿಸಲು ಪ್ರವಾಸಿಗರು ಕುಳಿತುಕೊಳ್ಳುತ್ತಿದ್ದ ಸಿಮೆಂಟ್ ಆಸನಗಳ ಮೇಲೆ ಕಳೆ ಬೆಳೆದಿದೆ. ಹೀಗೆ ಕಾರಂಜಿ ಅವ್ಯವಸ್ಥೆಗಳ ಆಗರವಾಗಿದೆ.

ನೃತ್ಯ ಕಾರಂಜಿ ನೋಡಲು ಬಂದ ಪ್ರವಾಸಿಗರಿಗೆ ನೀಡಿದ ಟಿಕೆಟ್ ಹಣದಿಂದಲೇ  ಕಾರಂಜಿಯನ್ನು ನಿರ್ವಹಣೆ ಮಾಡಬಹುದಿತ್ತು. ಆದರೆ, ಬಾಲ ಭವನ ಸಮಿತಿ ಈ ಬಗ್ಗೆ ಲಕ್ಷ್ಯವನ್ನೇ ನೀಡಿಲ್ಲ. ಕಾರಂಜಿಯನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗೆ ವೇತನ ಬಿಟ್ಟರೆ ಉಳಿದ ಹಣ ಎಲ್ಲಿ ಹೋಯಿತು ಎನ್ನುವುದು ಯಕ್ಷಪ್ರಶ್ನೆ.

ನೃತ್ಯ, ಸಂಗೀತ ಕಾರಂಜಿ ಅವ್ಯವಸ್ಥೆ ನೋಡಿ ಹಿಂದೆ ಇಲ್ಲಿ ಜಿಲ್ಲಾಧಿಕಾರಿಯಾಗಿದ್ದ ಬಿ.ಎನ್.ಕೃಷ್ಣಯ್ಯ ಅವರು ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳಿಗೆ ಪತ್ರ ಬರೆದು ಕಾರಂಜಿ ದುರಸ್ತಿ ಮಾಡಿಕೊಂಡುವಂತೆ ಕೋರಿದ್ದರು. ಈ ವಿಷಯದಲ್ಲಿ ಕೈಗಾ ಅಧಿಕಾರಿಗಳು ನಿರಾಶಕ್ತಿ ತೋರಿರುವುದರಿಂದ ನೃತ್ಯ, ಕಾರಂಜಿ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

`ದಶಕದ ಹಿಂದೆ ಇಲ್ಲಿ ಬಂದಾಗ ಸಂಗೀತ ನೃತ್ಯ ಕಾರಂಜಿಯ ವೈಭವ ನೋಡಿಹೋಗಿದೆ. ಕಾರಂಜಿಯ ಈಗಿನ ಸ್ಥಿತಿ ನೋಡಿ ಬೇಸರವೆನಿಸಿತು. ಕಾರಂಜಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ವಿಷಾದನೀಯ. ಮುಂದಿನ ದಿನಗಳಲ್ಲಾದರೂ ಕಾರಂಜಿ ದುರಸ್ತಿ ಮಾಡುವ ಬಗ್ಗೆ ಸಮಿತಿ ಕ್ರಮಕೈಗೊಳ್ಳಬೇಕು~ ಎಂದು ಪ್ರವಾಸಿಗ ಬೆಂಗಳೂರಿನ ಅಶೋಕ ಬಿ.ಎನ್. `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.