ADVERTISEMENT

ಹೆದ್ದಾರಿ ಮೇಲೆ ಬಿಡಾಡಿ ದನಗಳ ಬೀಡು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 8:01 IST
Last Updated 30 ಸೆಪ್ಟೆಂಬರ್ 2013, 8:01 IST
ಕಾರವಾರದ ರಾಷ್ಟ್ರೀಯ ಹೆದ್ದಾರಿ–17ರಲ್ಲಿ ಅಡ್ಡಲಾಗಿ ನಿಂತಿರುವ ಬಿಡಾಡಿ ದನಗಳ ಹಿಂಡು
ಕಾರವಾರದ ರಾಷ್ಟ್ರೀಯ ಹೆದ್ದಾರಿ–17ರಲ್ಲಿ ಅಡ್ಡಲಾಗಿ ನಿಂತಿರುವ ಬಿಡಾಡಿ ದನಗಳ ಹಿಂಡು   

ಕಾರವಾರ: ನಗರದಲ್ಲಿ ಬಿಡಾಡಿ ದನಗಳುಗುಂಪು ಗುಂಪಾಗಿ ಪರೇಡ್‌ ನಡೆಸುವುದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.
ನಗರದ ಮಹಾತ್ಮಗಾಂಧಿ ರಸ್ತೆ, ಗ್ರೀನ್‌ಸ್ಟ್ರೀಟ್‌ ರಸ್ತೆ, ಪಿಕಳೆ ರಸ್ತೆ, ಕಾಜುಬಾಗ, ಕೋಡಿಬಾಗ ಮತ್ತಿತರ ಕಡೆಗಳಲ್ಲಿ ಬಿಡಾಡಿ ದನಗಳ ಹಾವಳಿ ತೀವ್ರವಾಗಿದೆ. ರಾಸುಗಳು ಎಲ್ಲೆಂದರಲ್ಲಿ ರಸ್ತೆಗೆ ಅಡ್ಡಲಾಗಿಯೇ ನಿಂತು ಬಿಡುತ್ತವೆ. ವಾಹನಗಳ ಸವಾರರು ಹಾರ್ನ್‌ ಮಾಡಿದರೂ ಅವು ಜಗ್ಗುವುದಿಲ್ಲ. ಇದರಿಂದ ಸವಾರರು ಮುಂದೆ ಸಾಗಲು ತೊಂದರೆ ಅನುಭವಿಸುವಂತಾಗಿದೆ.

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–17 ಸದಾ ವಾಹನ ದಟ್ಟಣೆಯಿಂದ ಕೂಡಿದೆ. ಇಲ್ಲಿ ನಿತ್ಯ ಭಾರಿ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೆದ್ದಾರಿಯಾದ್ದರಿಂದ ವಾಹನಗಳು ತುಸು ವೇಗವಾಗಿಯೇ ಚಲಿಸುತ್ತಿರುತ್ತವೆ. ಹೆದ್ದಾರಿಯಲ್ಲಿಯೇ ಬಿಡಾಡಿ ದನಗಳು ಹಿಂಡು ಠಿಕಾಣಿ ಹೂಡುತ್ತಿವೆ. ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವುದು ನಿಶ್ಚಿತ.

ಬೀಚ್‌ನಲ್ಲೂ ಹಾವಳಿ: ಇಲ್ಲಿನ ರವೀಂದ್ರನಾಥ ಟಾಗೋರ್‌ ಕಡಲತೀರದ ಬಳಿಯಲ್ಲಿಯೂ ದನಗಳ ಕಾಟ ಜಾಸ್ತಿಯಾಗಿದೆ. ಕಡಲತೀರದ ಸೌಂದರ್ಯ ಸವಿಯಲು ಸಂಜೆ ವೇಳೆ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ, ಕಡಲ ತೀರದಲ್ಲಿ ಕೆಲವೊಮ್ಮೆ ಗೂಳಿಗಳು ನಡೆಸುವ ಕಾದಾಟ ಪ್ರವಾಸಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. 

‘ಬಿಡಾಡಿ ದನಗಳ ನಿಯಂತ್ರಣ ಸಂಪೂರ್ಣವಾಗಿ ನಗರಸಭೆ ಜವಾಬ್ದಾರಿ. ಆದರೆ, ಈ ಬಗ್ಗೆ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತು ಬೀಡಾಡಿ ದನಗಳನ್ನು ನಿಯಂತ್ರಿಸಬೇಕು’ ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಮಾಲೀಕರಿಗೆ ದಂಡ..
ಬೀಡಾಡಿ ದನಗಳ ಹಾವಳಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ರಾಸುಗಳನ್ನು ರಸ್ತೆಗೆ ಬಿಡುವ ಮಾಲೀಕರಿಗೆ ದಂಡ ವಿಧಿಸಲಾಗುವುದು. ಬಿಡಾಡಿ ದನಗಳನ್ನು ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಬಳಿಯಿರುವ ಕರೂರ್‌ ಮೈದಾನದಲ್ಲಿ ಕೂಡಿಹಾಕಲಾಗುವುದು. ವಾರಸುದಾರರು ಬಾರದಿದ್ದಲ್ಲಿ ದನಗಳನ್ನು ಕುಮಟಾದಲ್ಲಿರುವ ಗೋಶಾಲೆಗೆ ಕಳುಹಿಸಲಾಗುವುದು.
ಸಿ.ಡಿ. ದಳವಿ,  ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.