ADVERTISEMENT

‘ಬಂಗಾರ’ಮ್ಮನಿಗೆ ವಿಶೇಷ ಪೂಜೆ

ಸಂಕ್ರಾಂತಿ ಹಬ್ಬ: ದೋಣಿಯಲ್ಲಿ ಬಂದು ದೇವಿಯನ್ನು ಪೂಜಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 6:12 IST
Last Updated 16 ಜನವರಿ 2016, 6:12 IST
ಮಕರ ಸಂಕ್ರಾಂತಿ ಅಂಗವಾಗಿ ಕುಮಟಾ ತಾಲ್ಲೂಕಿನ ಮಣಕೋಣದ  ‘ಬಂಗಾರ ದೇವತೆ’ ಮನೆಯಲ್ಲಿ ವಿಶೇಷ ಪೂಜೆ ನಡೆಯಿತು
ಮಕರ ಸಂಕ್ರಾಂತಿ ಅಂಗವಾಗಿ ಕುಮಟಾ ತಾಲ್ಲೂಕಿನ ಮಣಕೋಣದ ‘ಬಂಗಾರ ದೇವತೆ’ ಮನೆಯಲ್ಲಿ ವಿಶೇಷ ಪೂಜೆ ನಡೆಯಿತು   

ಕುಮಟಾ: ಭಕ್ತರು ಬಂಗಾರ ಬೇಕೆಂದು ಬೇಡಿಕೆಯಿಟ್ಟರೆ ಮರುದಿನ  ಬಂಗಾರದ ಆಭರಣಗಳನ್ನೇ ದಯಪಾಲಿಸುತ್ತಿದ್ದಳು ಎನ್ನುವ  ನಂಬಿಕೆ ಇಲ್ಲಿದೆ. ತಾಲ್ಲೂಕಿನ ಮಣಕೋಣದ ಬಂಗಾರ ದೇವೆತೆಗೆ ಮಕರ ಸಂಕ್ರಾಂತಿ ಅಂಗವಾಗಿ ತಾಲ್ಲೂಕು ಹಾಗೂ ಗೋವಾದ ಸಹಸ್ರ ಭಕ್ತರು ಶುಕ್ರವಾರ ಪೂಜೆ ಸಲ್ಲಿಸಿದರು.

‘ಬಂಗಾರ ದೇವತೆಗೆ ಸುತ್ತಲಿನ ಹತ್ತಾರುಹಳ್ಳಿ, ಅಕ್ಕಪಕ್ಕದ ತಾಲ್ಲೂಕು ಹಾಗೂ ಗೋವಾ ರಾಜ್ಯದಿಂದಲೂ ಭಕ್ತಾದಿ­ಗಳು ಬಂದು ಬಾಳೆಗೊಣೆ ಪೂಜೆ ಸಲ್ಲಿಸುವುದು ವಿಶೇಷ’ ಎಂದು ಮಣ­ಕೋಣ ಗ್ರಾಮದ ಕೃಷಿಕ ನಾರಾಯಣ ವೆಂಕಟ ನಾಯ್ಕ ತಿಳಿಸುತ್ತಾರೆ.

ಐತಿಹಾಸಿಕ ಹಿನ್ನೆಲೆ
ಹಿಂದೆ ಬಂಗಾರದ ಆಭರಣಗಳಿಲ್ಲದ ಊರಿನ ಬಡವರು ಮದುವೆಗೆ ತೆರಳಲು ಬಂಗಾರದ ಆಭರಣಗಳು ಬೇಕಾದರೆ ಇಲ್ಲಿಯ ಬಂಗಾರದ ದೇವೆತೆ ಬಳಿ ಬಂಗಾರ ಕೊಡು ಎಂದು ಬೇಡಿ­ಕೊಳ್ಳುತ್ತಿದ್ದರಂತೆ. ಮರುದಿನ ಬೆಳಿಗ್ಗೆ ಒಂದು ಬಟ್ಟಲಲ್ಲಿ ದೇವಿ ಬಂಗಾರದ ಆಭರಣ ಕರುಣಿಸುತ್ತಿದ್ದಳಂತೆ. ಮದುವೆ ಮನೆಗೆ ಧರಿಸಿಕೊಂಡು  ಹೋಗಿ ಆ ಆಭರಣವನ್ನು ಸಂಜೆ ಹೊತ್ತು ದೇವಿಯ ಎದುರು ವಾಪಸ್ ಇಟ್ಟು ಬರುವುದು ವಾಡಿಕೆ. ಹೀಗಾಗಿ ಬಂಗಾರಮ್ಮ, ಬಂಗಾರ ದೇವತೆ ಎಂಬ ಹೆಸರು ಬಂತು.

ಆದರೆ ಯಾರೋ ಒಬ್ಬರು ದುರಾಸೆಯಿಂದ ದೇವಿಯಿಂದ ಪಡೆದ ಆಭರಣಗಳನ್ನು ವಾಪಸ್‌ ನೀಡಲೇ ಇಲ್ಲವಂತೆ. ಆಂದಿನಿಂದ ದೇವಿ  ಭಕ್ತರಿಗೆ ಬಂಗಾರ ದಯಪಾಲಿಸುವುದನ್ನು ನಿಲ್ಲಿಸಿಬಿಟ್ಟಳು ಎನ್ನುವುದು ಈ ದೇವಿಯ ಬಗ್ಗೆ ಇರುವ ಕುತೂಹಲಕಾರಿ ಕತೆ.

ಮಕರ ಸಂಕ್ರಾಂತಿ ಸಂದರ್ಭದಲ್ಲಿ ಇಲ್ಲಿ ಹಗಲು–ರಾತ್ರಿ ದೇವಿಯ ಪೂಜೆ ನಡೆಯುವುದರಿಂದ ತಾಲ್ಲೂಕಿನ ಅಘ­ನಾಶಿನಿ ನದಿಯ ಅಂಚಿನ ಅಂತ್ರವಳ್ಳಿ, ಹೊಂಡದಹಕ್ಕಲು, ಉಪ್ಪಿನಪಟ್ಟಣ ಧಕ್ಕೆ, ಶಿರಗುಂಜಿ, ಬೊಗರುಬೈಲ, ಕಲ್ಲಬ್ಬೆ, ಹೊಸಧಕ್ಕೆ, ಕರ್ಕಿಮಕ್ಕಿ, ಮುಸುಗುಪ್ಪ, ದೀವಗಿ, ಮಿರ್ಜಾನ, ಕೊಡಕಣಿ ಮುಂತಾದ ಅನೇಕ ಊರು­ಗಳ ಭಕ್ತರು ರಾತ್ರಿ ದೋಣಿಯಲ್ಲಿ ಬಂದು ದೇವಿಗೆ ಪೂಜೆ ಸಲ್ಲಿಸುವುದು ವಿಶೇಷ.

ಈ ವರ್ಷ ಸಂಕ್ರಾಂತಿ ಹಬ್ಬದ ನಿಮಿತ್ತ ದೇವಿಯ ಪುಟ್ಟ ಗುಡಿಯ ಪಕ್ಕದಲ್ಲಿ  ಹರಿಯುವ ಅಘನಾಶಿನಿ ನದಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಹಾಲಕ್ಕಿ ಒಕ್ಕಲು ಸಮಾಜದ ಪೂಜಾ­ರಿಗಳು ಇಲ್ಲಿ ದೇವಿಯ ಪೂಜೆ ಮಾಡು­ತ್ತಾರೆ. ಮಕರ ಸಂಕ್ರಾಂತಿ ಅಂಗವಾಗಿ ಇಲ್ಲಿ ಮೂರು ದಿವಸಗಳ ಕಾಲ ವಿಶೇಷ ಪೂಜೆ ನಡೆಯುತ್ತದೆ. ಅಘನಾಶಿನಿ ನದಿಯ ದಡದ ಮೇಲಿರುವ ದೇವಿಯ ಗುಡಿ ಪ್ರತೀ ವರ್ಷದ ನೆರೆಯ ನೀರಿನಲ್ಲಿ ಮುಳುಗುತ್ತದೆ. ಮಕರ ಸಂಕ್ರಾಂತಿ  ಸಂದರ್ಭದಲ್ಲಿ ಊರಿನವರು ದೇವಾ­ಲಯ ಆವಾರ  ಶುಚಿಗೊಳಿಸಿ ಭಕ್ತರಿಗೆ ಪೂಜೆಗೆ  ಅನುಕೂಲ ಕಲ್ಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.