ಶಿರಸಿ: ‘ಕುದುರೆ ಕೊಡಲು ಸಾಧ್ಯವಾಗದ ಅಪ್ಪ ಅದಕ್ಕೆ ಬದಲಾಗಿ ಮಗಳನ್ನೇ ಕೊಡುತ್ತಾನೆ. ಒಂದು ಹೆಣ್ಣಿಗೆ ವಸ್ತುವಿನಂತೆ ಬೆಲೆ ಕಟ್ಟಿದ ಮಹಾರಾಜನಾಗಿದ್ದ ಈ ಅಪ್ಪನನ್ನು ನಾವು ಆದರ್ಶ ಪುರುಷನೆಂದು ಒಪ್ಪಿಕೊಳ್ಳಲು ಸಾಧ್ಯವೇ’ ಹೀಗೆಂದು ಪಿಯುಸಿ ವಿದ್ಯಾರ್ಥಿಯೊಬ್ಬಳು ಪ್ರಶ್ನಿಸಿ ಮಾತನಾಡಿದಾಗ ಸಭೆಯಲ್ಲಿ ಕುಳಿದ್ದವರು ಹುಬ್ಬೇರಿಸಿದರು.
ಡಾ. ಅನುಪಮಾ ನಿರಂಜನ ಅವರ ‘ಮಾಧವಿ’ ಪೌರಾಣಿಕ ಕಾದಂಬರಿಯನ್ನು ಓದಿ ಪ್ರೇರಿತಳಾಗಿದ್ದ ಈಕೆ ಮುಂದುವರಿದು ‘ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಮಕ್ಕಳಿಗೆ ಜನ್ಮಕೊಡುವ ಯಂತ್ರವನ್ನಾಗಿ ಕಾಣುತ್ತದೆ. ಹಿಂದಿನ ಕಾಲದ ಪರಿಸ್ಥಿತಿಯ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಬದಲಾಗಿಲ್ಲ. ಗಂಡಿಗೆ ಇಲ್ಲದ ಕಟ್ಟುಪಾಡು ಹೆಣ್ಣಿಗೆ ಯಾಕಿರಬೇಕು. ಮೌಢ್ಯಗಳಿಂದ ಒಂದು ಸ್ತ್ರೀಯನ್ನು ತೂಗುವುದಾದರೆ ಅದೇ ಮೌಢ್ಯವನ್ನು ಪುರುಷನಿಗೆ ಯಾಕೆ ಅನ್ವಯಿಬಾರದು’ ಎಂದು ಸ್ತ್ರೀವಾದಿ ಚಿಂತನೆಯಲ್ಲಿ ಆಕೆ ಖಾರವಾಗಿ ಪ್ರಶ್ನಿಸಿದಳು.
ಇಲ್ಲಿನ ಮಾರಿಗುಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗವು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ‘ನನ್ನ ಮೆಚ್ಚಿನ ಪುಸ್ತಕ’ ವಿದ್ಯಾರ್ಥಿಗಳ ಪ್ರಬಂಧ ಮಂಡನಾ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ 23 ಮಕ್ಕಳು ಭಾಗವಹಿಸಿದ್ದರು. ಪುಸ್ತಕದ ಆಯ್ಕೆ, ಕಥಾ ವಸ್ತು ನಿರೂಪಣೆ ಹಾಗೂ ಪುಸ್ತಕದಿಂದ ವಿದ್ಯಾರ್ಥಿಯ ಮೇಲೆ ಆಗಿರುವ ಪ್ರಭಾವ ಈ ಮೂರು ಅಂಶಗಳನ್ನು ಕೇಂದ್ರೀಕರಿಸಿ ನಿರ್ಣಾಯಕರು ಸ್ಪರ್ಧಿಗಳಿಗೆ ಅಂಕ ನೀಡಿದರು.
ಎಚ್. ನರಸಿಂಹಯ್ಯ, ಜ್ಯೋತಿ ಬಾಪುಲೆ, ಅಕ್ಕಮಹಾದೇವಿ, ಗುರುರಾಜ ಕರ್ಜಗಿ ಮೊದಲಾದ ಕೃತಿಕಾರರ ಕೃತಿಗಳನ್ನು ಓದಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಪ್ರಬುದ್ಧವಾಗಿ ವಿಷಯ ಮಂಡಿಸಿದರು. ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ‘ಜ್ಞಾನದ ಹಸಿವು, ಪುಸ್ತಕದ ಓದು ಜಗತ್ತಿನ ಎಲ್ಲ ಅಹಂಕಾರಗಳನ್ನು ಸುಟ್ಟು ನೀರು ಮಾಡುತ್ತದೆ. ಬರಹದ ಮೂಲಕ ಚಿರಂತನ ಬದುಕನ್ನು ಸೃಷ್ಟಿಸಿಕೊಳ್ಳಬಹುದು. ಪಂಪ, ವ್ಯಾಸ, ಕುವೆಂಪು ಇಂತಹ ಅನೇಕ ಸಾಹಿತ್ಯ ಕರ್ತೃರು ಸಾವಿರ ವರ್ಷ ಕಳೆದರೂ ಬರಹದೊಡನೆ ನಮ್ಮೊಂದಿಗೆ ಜೀವಂತವಾಗಿರುತ್ತಾರೆ’ ಎಂದು ತಿಳಿಸಿದರು.
ಕೃತಿಯಿಂದ ಕೃತಿಗೆ ಓದಿನಿಂದ ಓದಿಗೆ ಓದುಗ ಬದಲಾಗಬೇಕು. ಕೃತಿಯೊಳಗಿನ ದೋಷವನ್ನು ಕಳೆಯುತ್ತ ಪೂರ್ಣ ವಿಷಯವನ್ನು ಅರಿಯುವ ಹಂತ ತಲುಪಿದಾಗ ಆತ ಉತ್ತಮ ಓದುಗನಾಗುತ್ತಾನೆ. ಕೃತಿಗಳ ಓದಿನ ಸ್ಫೂರ್ತಿಯಿಂದ ಉನ್ನತ ಕೃತಿಗಳು ಹೊರಬರಬೇಕು. ನೈಜ ಬರಹವು ಜ್ಞಾನ ಸ್ವರೂಪಿಯಾಗಿದ್ದು ಮಾನವನೊಳಗಿನ ಅಹಂಕಾರ ನಾಶ ಮಾಡುತ್ತದೆ ಎಂದರು. ಮಾಧವಿ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ರಮ್ಯಾ ಹೆಗಡೆ ಪ್ರಥಮ, ಎಂ.ಎನ್. ಚಿನ್ಮಯ ದ್ವಿತೀಯ, ಹರ್ಷಿತಾ ತೃತೀಯ ಸ್ಥಾನ ಪಡೆದರು.
ಮನುಷ್ಯ ಹುಟ್ಟು– ಸಾವಿನ ನಡುವಿನ ಶೂನ್ಯವನ್ನು ಸೃಜನಶೀಲ ಚಟುವಟಿಕೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತದೆ
- ಸುಬ್ರಾಯ ಮತ್ತೀಹಳ್ಳಿ,
ವಿಮರ್ಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.