ADVERTISEMENT

‘ಬುಡಕಟ್ಟು ಸಂಸ್ಕೃತಿಯೇ ನೈಜ ಸಂಸ್ಕೃತಿ’

ರಾಜ್ಯಮಟ್ಟದ ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳ ಕಮ್ಮಟ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 9:00 IST
Last Updated 19 ಮಾರ್ಚ್ 2014, 9:00 IST

ದಾಂಡೇಲಿ: ‘ಈ ದೇಶದ ಸಾಂಸ್ಕೃತಿಕ ಅವಿಚಿನ್ನ ಆಸ್ತಿಯಾದ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯವಾಗಬೇಕಾಗಿದೆ. ಸ್ಥಳೀಯ ನೆಲಮೂಲದ ಕಲೆ, ಸಂಸ್ಕೃತಿಗಳನ್ನೊಳ ಗೊಂಡ ಬುಡಕಟ್ಟು ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ಉನ್ನತಿಕರಿ ಸುವ ಸಲುವಾಗಿ ಸರ್ಕಾರ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಬುಡಕಟ್ಟು ಜಾತ್ರೆಗಳನ್ನು ಹಮ್ಮಿಕೊಳ್ಳು ವುದರ ಮೂಲಕ ರಾಷ್ಟ್ರದ ಸಾಂಸ್ಕೃತಿಕ ಶಕ್ತಿಯನ್ನು ಸದೃಢಗೊಳಿಸಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ  ಹೇಳಿದರು.

ನಗರದ ಹಳೆ ದಾಂಡೇಲಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳ ಕಮ್ಮಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ’ನಮ್ಮ ನೆಲದ  ವೈವಿಧ್ಯಮಯ ಬುಡಕಟ್ಟು ಸಂಸ್ಕೃತಿ, ಆಧುನೀಕತೆಯ ಭರಾಟೆಯಲ್ಲಿ  ನಶಿಸಿಹೋಗಬಾರದು. ಅದನ್ನು ರಕ್ಷಿಸಿ, ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ  ಚಿಂತಕ ಪ್ರೊ.ಕಾಳೇಗೌಡ ನಾಗವಾರ, ‘ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಮತ್ತು ಸಾಂಸ್ಕೃತಿಕ ಸೊಬಗಿನ ಪರಿಸರದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿದೆ. ಬುಡಕಟ್ಟು ಸಂಸ್ಕೃತಿ ಎಂಬ ಸೃಜನಶೀಲ ಆಯಾಮವನ್ನು ಉಳಿಸಿ ಬೆಳೆಸುವ ಮಹತ್ವದ ಪರಿಕಲ್ಪನೆಯೆ ಈ ಕಮ್ಮಟ ಎಂದು ಬಣ್ಣಿಸಿದರು.

‘ಸಾಂಸ್ಕೃತಿಕ ಆಸ್ತಿಯಾದ ಬುಡಕಟ್ಟು ಸಂಸ್ಕೃತಿ ಯನ್ನು ತಲೆತಲಾಂತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪ್ರೇರಕಶಕ್ತಿಯಾಗಲಿ’ ಎಂದರು.

ಹಂಪಿ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ವಿ.ಸಿ.ಸವಡಿ ಮಾತನಾಡಿ, ‘ಆದಿವಾಸಿ ಸಂಸ್ಕೃತಿಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹಂಪಿ ವಿಶ್ವವಿಶ್ವವಿದ್ಯಾಲಯ ಕೈಗೆತ್ತಿಕೊಂಡ ಕಾರ್ಯಕ್ರಮ ಸ್ವಾಗತಾರ್ಹ’ ಎಂದರು.

ಹಂಪಿ ವಿವಿ ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ.ಎ.ಎಸ್.ಪ್ರಭಾಕರ ಆಶಯ ಭಾಷಣ ಮಾಡಿದರು.  ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ಡಿಯೋಗಾ ಸಿದ್ದಿ ಮಾತನಾಡಿ, ‘ಸಿದ್ದಿ ಸಂಸ್ಕೃತಿ ದೇಶದ ವಿಶೇಷವಾದ ಸಂಸ್ಕೃತಿಯಾಗಿದೆ. ಕತ್ತಲೆಕೋಣೆ ಯೊಳಗಿದ್ದ ಸಿದ್ದಿ ಸಂಸ್ಕೃತಿ ಬೆಳಕಿಗೆ ಬಂದಿದೆ’ ಎಂದರು.

ಗ್ರೀನ್ ಇಂಡಿಯಾ ನಿರ್ದೇಶಕ ಬಿ.ಪಿ. ಮಹೇಂದ್ರಕುಮಾರ್ ಸ್ವಾಗತಿಸಿದರು. ಹಂಪಿ ವಿಶ್ವ ವಿದ್ಯಾಲಯದ ಪ್ರೊ.ಶಶಿಕಿರಣ ನಿರೂಪಿಸಿದರು.

ರಂಜಿಸಿದ ಡಮಾಮಿ, ಹೋಳಿ ಹಳಬು: ಕಾರ್ಯಕ್ರಮದಲ್ಲಿ ಸಿದ್ದಿಯರ ಡಮಾಮಿ ಕುಣಿತವನ್ನು ಸಿದ್ದಿ ಮಕ್ಕಳು ಪ್ರದರ್ಶಿಸಿ ಅಪಾರ ಜನಪ್ರಶಂಸೆಗೆ ಪಾತ್ರರಾದರು.

ಹೊಂಡರ ಹೋಳಿ ಹಳಬು ನೃತ್ಯವು ಯಶಸ್ವಿಯಾಗಿ ಪ್ರದರ್ಶನವನ್ನು ಕಂಡಿತು. ಸಿದ್ದಿಯರ ಡಯಾಮಿ ಕುಣಿತದ ಬಗ್ಗೆ ಡಿಯೋಗಾ ಸಿದ್ದಿ  ಹಾಗೂ ಗೊಂಡರ ಹೋಳಿ ಹಳಬು ಕುರಿತು  ತಿಮ್ಮಪ್ಪ ಗೊಂಡ ಮತ್ತು ಡಾ.ಸೈಯದ್ ಜಮೀರುಲ್ಲಾ ಷರೀಪ್‌  ಸಂವಾದ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.