ADVERTISEMENT

‘ಮಾನವೀಯ ಹಿನ್ನೆಲೆಯಲ್ಲಿ ಅರ್ಜಿ ಪರಿಶೀಲಿಸಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 7:10 IST
Last Updated 12 ಡಿಸೆಂಬರ್ 2013, 7:10 IST

ಯಲ್ಲಾಪುರ: ‘ಜನರು ಜನಪ್ರತಿನಿಧಿಗಳ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿ ಕೊಂಡು ಹೋಗಬೇಕಾ ಗಿರುವುದು ಪ್ರತಿಯೊಬ್ಬ ಜನಪ್ರತಿ ನಿಧಿಯ ಕರ್ತವ್ಯ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ  ಪಟ್ಟಣ ಪಂಚಾಯ್ತಿ 18 ವಾರ್ಡ್‌ಗಳ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಟ್ಟಣ ಪಂಚಾಯ್ತಿ ಆಡಳಿತ ತೃಪ್ತಿದಾಯಕವಾಗಿಲ್ಲ ಎನ್ನುವುದರ ಕುರಿತು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದೆ. ಸಾರ್ವಜನಿಕರ ಶೋಷಣೆಯನ್ನು ನಿಲ್ಲಿಸಿ ಮಾನವೀಯ ಹಿನ್ನಲೆಯಲ್ಲಿ ಅರ್ಜಿಗಳನ್ನು ಪರಿಶೀಲಿಸಬೇಕು’ ಎಂದರು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಪಟ್ಟಣ ಪಂಚಾಯ್ತಿ ಸದಸ್ಯ ರೊಂದಿಗೆ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು. ‘ಎಲ್ಲದಕ್ಕೂ ಪಟ್ಟಣ ಪಂಚಾಯ್ತಿಯನ್ನು ದೂಷಿಸುವುದು ಸರಿಯಲ್ಲ. ಜನತೆ ಕೂಡ ತಮ್ಮ  ಜವಾಬ್ದಾರಿ ಅರಿತು ನಿರ್ವಹಿಸ ಬೇಕಾಗಿದೆ. ಸ್ವಚ್ಛತೆ ನಿರ್ವಹಣೆಯಲ್ಲಿ ತಮ್ಮ ಪಾಲುದಾರಿಕೆ ಎಷ್ಟು ಎಂದು ಸಾರ್ವಜನಿಕರು ಅರಿಯಬೇಕಾಗಿದೆ’ ಎಂದರು.

‘ನಗರೋತ್ಥಾನ ಯೋಜನೆ ₨ 5.52 ಕೋಟಿ ವೆಚ್ಚದ ಕಾಮಗಾರಿ ಪಟ್ಟಣದ ಅಭಿವೃದ್ಧಿಗಾಗಿ ಇದೆಯೋ ಅಥವಾ ಪಟ್ಟಣ ಹಾಳುಗೆಡವಲು ಇದೆಯೋ’ ಎಂದು ಪ್ರಶ್ನಿಸಿದ ನೂರ್‌ ಅಹ್ಮದ, ‘ಈ ಕಾಮಗಾರಿಯಲ್ಲಿ ಅರೆಬರೆ ಕೆಲಸ ಮಾಡಿ ರಸ್ತೆ ಹಾಗೂ ಚರಂಡಿಗಳ ಅಂದಗೆಡಿಸಲಾಗಿದೆ. ಸಂಚಾರಕ್ಕೂ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿದರು.

‘ಅಂಡೇಡ್ಕರ್‌ ವೃತ್ತದಿಂದ ಗಾಂಧಿ ವೃತ್ತದವರೆಗಿನ ಪುಟ್‌ಪಾತ್‌ನಲ್ಲಿ ಪಾದಚಾರಿಗಳು ಓಡಾಡುತ್ತಿಲ್ಲ. ಪುಟಪಾತ್ ನಿರ್ಮಾಣದಿಂದ ರಸ್ತೆ ಕಿರಿದಾಗಿದ್ದು, ಪುಟಪಾತ್ ಪಕ್ಕದಲ್ಲಿ ಬೈಕ್ ಕಾರು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಪುಟಪಾತ್ ಕಿತ್ತು ಹಾಕಿ ಅಥವಾ ವಾಹನ ನಿಲುಗಡೆಯನ್ನು ಸ್ಥಗಿತಗೊಳಿಸಿ ಕಡ್ಡಾಯವಾಗಿ ಪಾದಚಾರಿಗಳನ್ನು ಪುಟಪಾತ್‌ನಲ್ಲೇ ಓಡಾಡುವಂತೆ ಕ್ರಮ ಕೈಗೊಳ್ಳಿ’ ಎಂದು ಸುಧೀರ್‌ ಕೊಡ್ಕಣಿ ಒತ್ತಾಯಿಸಿದರು.

‘ಸಾರ್ವಜನಿಕರ ಎಲ್ಲ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿ ಗಳೊಂದಿಗೆ ಚರ್ಚಿಸಿ ಯೋಗ್ಯ ಕ್ರಮ ಕೈಗೊಳ್ಳಲಾಗುವುದು’ ಎಂದ ಶಾಸಕರು, ‘ಪಟ್ಟಣ ವ್ಯಾಪ್ತಿಯ ಅತಿಕ್ರಮಣ ಸಕ್ರಮದಲ್ಲಿ ಯಾವುದೇ ಬಡವರಿಗೂ ಅನ್ಯಾಯವಾಗಬಾರದು. ಅತಿಕ್ರಮಣದಾರರಿಗೆ ಕೊನೆಯ ಅವಕಾಶ ಇದಾಗಿದ್ದು ಎಲ್ಲ ಸದಸ್ಯರು ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಅತಿಕ್ರಮಣದಾರರಿಗೆ ಮಾಹಿತಿ ನೀಡಿ’ ಎಂದರು.

ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ರಾಯಕರ, ಉಪಾಧ್ಯಕ್ಷ ಗಣೇಶ ಪಾಟಣಕರ, ಮುಖ್ಯಾಧಿಕಾರಿ ಬಿ.ಬಾಬು, ಪ್ರಮುಖರಾದ ವಿಜಯ ಮಿರಾಶಿ, ಪ್ರೇಮಾನಂದ ನಾಯ್ಕ ಹಾಗೂ 18 ವಾರ್ಡಿನ ಸದಸ್ಯರು, ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT