ADVERTISEMENT

‘ಲೋಪಕ್ಕೆ ಅಧಿಕಾರಿಗಳು ಹೊಣೆ’

ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:36 IST
Last Updated 17 ಡಿಸೆಂಬರ್ 2013, 6:36 IST

ಕಾರವಾರ: ‘ಎಲ್ಲ ಇಲಾಖೆಗಳು ಕ್ರಿಯಾ ಯೋಜನೆ ಪ್ರಕಾರ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸ ಬೇಕು. ಅನುದಾನ ಲೋಪವಾದರೆ ಆಯಾ ಇಲಾಖೆ ಅಧಿಕಾರಿಗಳನ್ನು ಜವಾಬ್ದಾರಿ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ನಾರಾಯಣ ಗೌಡ  ಎಚ್ಚರಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

‘ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ಇಲಾಖೆ, ಭೂಸೇನಾ ನಿಗಮದಂತಹ ಇಲಾಖೆಗಳು ಫೆಬ್ರುವರಿ ಅಂತ್ಯದ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಅನುದಾನ ಲೋಪವಾಗಲು ಅವಕಾಶ ನೀಡಬಾರದು’ ಎಂದು ಸ್ಪಷ್ಟಪಡಿಸಿದರು.

ಹಾಲಿನ ಪುಡಿ ಪರೀಕ್ಷಿಸಿ:  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಮಾತನಾಡಿ, ‘ಕ್ಷೀರಭಾಗ್ಯ ಯೋಜನೆ ಅಡಿ ಹಾಲಿನ ಪುಡಿಯ ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸಬೇಕು. ಗುಣಮಟ್ಟದ ಬಗ್ಗೆ ಸ್ವಲ್ಪ ಸಂದೇಹ ಬಂದರೂ ಅದನ್ನು ಪರೀಕ್ಷಿಸಬೇಕು. ಪಡೆದುಕೊಳ್ಳಲಾಗಿರುವ ಹಾಲಿನ ಪುಡಿಯ ಅವಧಿ ಮುಗಿಯದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ವಿದ್ಯುತ್ ಸಂಪರ್ಕ: ‘ರಾಜೀವ್‌ಗಾಂಧಿ ವಿದ್ಯುದ್ದೀಕರಣ ಯೋಜನೆ ಅಡಿಯಲ್ಲಿ ಎಲ್ಲಾ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶವಿದೆ. ಇದುವರೆಗೆ ವಿದ್ಯುತ್ ಸಂಪರ್ಕ ಪಡೆಯದಿರುವ ಅಂಗನವಾಡಿ ಹಾಗೂ ಶಾಲೆಗಳ ಪಟ್ಟಿಯನ್ನು ಎರಡು ದಿನಗಳ ಒಳಗಾಗಿ ಸಲ್ಲಿಸಬೇಕು. ಕೆಲವು ಶಾಲೆಗಳ ಮೇಲೆ ವಿದ್ಯುತ್ ತಂತಿಗಳು ಅಪಾಯಕಾರಿ ರೀತಿಯಲ್ಲಿ ಹಾದು ಹೋದ ಬಗ್ಗೆ ದೂರುಗಳು ಬಂದಿದ್ದು, ಅವುಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರ ನೇಮಕ: ‘ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಕುರಿತು ಹಲವು ದೂರುಗಳು ಬರುತ್ತಿವೆ. ಯಾವುದೇ ಒತ್ತಡಕ್ಕೆ ಮಣಿಯದೆ ಮಾರ್ಗಸೂಚಿ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಮಾರ್ಗಸೂಚಿ ಬಿಟ್ಟು ನೇಮಕಾತಿ ಪ್ರಕ್ರಿಯೆ ನಡೆದರೆ ಅಧಿಕಾರಿಗಳನ್ನು ಜವಾಬ್ದಾರಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ಪ್ರಥಮ ಚಿಕಿತ್ಸಾ ಔಷಧಿ ಪೆಟ್ಟಿಗೆ ಸರಬರಾಜು ಮಾಡಲಾಗಿದ್ದು, ಅದನ್ನು ಬಳಸುವ ಬಗ್ಗೆ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಖರೀದಿ ಕೇಂದ್ರ: ‘ಜಿಲ್ಲೆಯಲ್ಲಿ ಈಗಾಗಲೇ ಜೋಳ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇನ್ನಷ್ಟು ಭತ್ತ ಖರೀದಿ ಕೇಂದ್ರ ತೆರೆಯುವ ಬಗ್ಗೆ ಬೇಡಿಕೆ ಬಂದರೆ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಂಟಿ ನಿರ್ದೇಶಕರು ಕೃಷಿ ಇಲಾಖೆ ತಿಳಿಸಿದರು.

ಜಿಲ್ಲೆಯಲ್ಲಿ ಮಣ್ಣಿನ ಪರೀಕ್ಷೆಯನ್ನು ಆಗಾಗ್ಗೆ ಮಾಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಕಟ್ಟಡ ನಿರ್ಮಾಣ: ‘ಸಾರ್ವಜನಿಕ ಶಿಕ್ಷಣ ಇಲಾಖೆಯ ಸೇರ್ಪಡೆ ಮತ್ತು ಮಾರ್ಪಾಡು ಯೋಜನೆ ಅಡಿ ಕಟ್ಟಡಗಳ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಶಿರಸಿ ಶೈಕ್ಷಣಿಕ ವಿಭಾಗದಲ್ಲಿ 21ಮತ್ತು ಕಾರವಾರ ವಿಭಾಗದಲ್ಲಿ 19 ಕಾಮಗಾರಿಗಳು ಇವೆ.

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಈ ಕಾಮಗಾರಿಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು’ ಎಂದು  ತಿಳಿಸಿದರು.

ಕಾಲುಬಾಯಿ ರೋಗ ಪರಿಹಾರ: ‘ಜಿಲ್ಲೆಯಲ್ಲಿ ಕಾಲುಬಾಯಿ ರೋಗದಿಂದ 50ಜಾನುವಾರುಗಳು ಸಾವನ್ನಪ್ಪಿವೆ. ಪ್ರತಿ ಪ್ರಕರಣದಲ್ಲಿ ₨ 20 ಸಾವಿರದಂತೆ ಒಟ್ಟು ರೂ 10ಲಕ್ಷ ಪರಿಹಾರ ಧನ ವಿತರಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದರು.
ಉಪಾಧ್ಯಕ್ಷ ಲಲಿತಾ ಪಟಗಾರ, ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಶಂಕರ ಗೌಡ, ಅಶೋಕ ಸಿರ್ಸಿಕರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.