ADVERTISEMENT

‘ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ಅನುಮತಿ ಬೇಡ’

ಕೇಂದ್ರ ಉನ್ನತ ಮಟ್ಟದ ತಂಡಕ್ಕೆ ಪರಿಸರ ಸಂರಕ್ಷಣಾ ಕೇಂದ್ರದ ಪತ್ರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:05 IST
Last Updated 18 ಡಿಸೆಂಬರ್ 2013, 5:05 IST

ಶಿರಸಿ: ಪ್ರಸ್ತಾಪಿತ ಹುಬ್ಬಳ್ಳಿ-–ಅಂಕೋಲಾ ರೈಲು ಯೋಜನೆಗೆ ಅನುಮತಿ ನೀಡಬಾರದು ಎಂದು ಇದೇ 18 ಹಾಗೂ 19ರಂದು ಯೋಜನೆ ಮರುಪರಿಶೀಲನೆ ಬರುವ ಕೇಂದ್ರದ ಉನ್ನತ ಮಟ್ಟದ ತಂಡಕ್ಕೆ ಇಲ್ಲಿನ ಪರಿಸರ ಸಂರಕ್ಷಣಾ ಕೇಂದ್ರ ಪತ್ರ ಬರೆದು ವಿನಂತಿಸಿದೆ.

‘ಹುಬ್ಬಳ್ಳಿ–ಅಂಕೋಲಾ ರೇಲ್ವೆ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನಿಸಿದೆ. ಈ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ನೇತೃತ್ವದ ತಂಡವು ಯೋಜನಾ ಸ್ಥಳದಲ್ಲಿ ಅಧ್ಯಯನ ನಡೆಸಿ ಪರಿಸರ ನಾಶ ಮಾಡದೆ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯ ಎಂಬ ವರದಿ ನೀಡಿತ್ತು. ದೆಹಲಿಯ ಮೆಟ್ರೊ ರೈಲು ನಿರ್ಮಾಣ ಖ್ಯಾತಿಯ ಡಾ.ಶ್ರೀಧರನ್‌ ಅವರಿಂದ ಸಹ ರಾಜ್ಯ ಸರ್ಕಾರ ಅಧ್ಯಯನ ನಡೆಸಿ ಹಸಿರು ನಿಶಾನೆ ಪಡೆದಿತ್ತು. ಆದರೆ ಒಂದು ದಶಕದಲ್ಲಿ ಪರಿಸ್ಥಿತಿ ಬದಲಾಗಿದೆ. ಪಶ್ಚಿಮಘಟ್ಟದ ರಕ್ಷಣೆಗಾಗಿ ಕೇಂದ್ರ ಸರ್ಕಾರ ನೇಮಿಸಿದ ಡಾ.ಮಾಧವ ಗಾಡ್ಗೀಳ್ ತಂಡ ಹಾಗೂ ಡಾ.ಕಸ್ತೂರಿ ರಂಗನ್ ತಂಡವು ಅರಣ್ಯ ನಾಶದ ಬೃಹತ್‌ ಯೋಜನೆಗೆ ಇಲ್ಲಿ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ’ ಎಂದು ಪರಿಸರ ಸಂರಕ್ಷಣಾ ಕೇಂದ್ರದ ಪಾಂಡುರಂಗ ಹೆಗಡೆ ಪತ್ರದಲ್ಲಿ ತಿಳಿಸಿದ್ದಾರೆ.

‘ಬಳ್ಳಾರಿಯಿಂದ ಬಂದರಿಗೆ ಸಾಗಿಸುವ ಅದಿರಿನ ಸಾಗಾಣಿಕೆ ಈಗ ಸ್ಥಗಿತಗೊಂಡಿದೆ. ಈ ಅದಿರನ್ನು ರಪ್ತು ಮಾಡುವ ಬದಲು ಸ್ಥಳೀಯವಾಗಿ ಉಕ್ಕು ಉದ್ದಿಮೆಗಳಿಗೆ ನೀಡಬೇಕೆಂಬ ಬೇಡಿಕೆಗೆ ಗಮನ ನೀಡಲಾಗುತ್ತಿದೆ. ಆದ್ದರಿಂದ ಈ ರೈಲು ಯೋಜನೆಯಿಂದ ಅದಿರು ಸಾಗಾಣಿಕೆಗೆ ಅನುಕೂಲ ಆಗುವುದೆಂಬ ವಾದಕ್ಕೆ ಹುರುಳಿಲ್ಲ. ಜಾಗತಿಕ ತಾಪಮಾನವನ್ನು ಕಾಪಾಡಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುವ ಪಶ್ಚಿಮಘಟ್ಟದ ಅರಣ್ಯದ ರಕ್ಷಣೆ ಆಗಬೇಕೆಂಬುದು ತಜ್ಞರ ಅಭಿಪ್ರಾಯ. ಸುರಂಗ ಮಾರ್ಗ ನಿರ್ಮಿಸಿ ಅರಣ್ಯ ನಾಶ ಕಡಿಮೆಗೊಳಿಸುವುದಾಗಿ ರೇಲ್ವೆ ಇಲಾಖೆ ಹೇಳುತ್ತಿದೆ.

ಆದರೆ ಇವು ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಮಾಡಲಾರವು. ಇವುಗಳಿಂದ ಅಂತರ್ಜಲ, ನೀರಿನ ಸೆಲೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಸ್ತಾಪಿತ ಯೋಜನೆ ದಾಂಡೇಲಿ ಅಭಯಾರಣ್ಯದ ಗಡಿಯಲ್ಲಿದ್ದು, ವನ್ಯ ಜೀವಿ ಕಾಯ್ದೆಯ ಉಲ್ಲಂಘನೆ ಆಗಲಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.