ADVERTISEMENT

ಮುಂಡಗೋಡ: ಮಳೆಯಿಂದ 38 ಶಾಲೆಗಳಲ್ಲಿ ಹಾನಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:21 IST
Last Updated 23 ಜುಲೈ 2024, 16:21 IST
ಮುಂಡಗೋಡ ತಾಲ್ಲೂಕಿನ ಕರವಳ್ಳಿ ಶಾಲೆಯ ಗೋಡೆಯು ಮಳೆಯಿಂದ ಕುಸಿದಿರುವುದು
ಮುಂಡಗೋಡ ತಾಲ್ಲೂಕಿನ ಕರವಳ್ಳಿ ಶಾಲೆಯ ಗೋಡೆಯು ಮಳೆಯಿಂದ ಕುಸಿದಿರುವುದು   

ಮುಂಡಗೋಡ: ನಿರಂತರ ಮಳೆಯಿಂದ ಪ್ರಾಥಮಿಕ ಶಾಲೆಗಳ ಕೊಠಡಿಗಳು ಕೆಲವೆಡೆ ಬಿರುಕು ಬಿಟ್ಟಂತೆ ಕಂಡುಬಂದಿದ್ದು, ಅಂತಹ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಕೆಲವೊಂದು ಕೊಠಡಿಗಳ ಗೋಡೆಗಳಲ್ಲಿ ನೀರು ಇಳಿದು ತಂಪಾಗಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಅಂತಹ ಕೊಠಡಿಗಳ ಬದಲಿಗೆ ಪರ್ಯಾಯ ಕೊಠಡಿಗಳಲ್ಲಿ ಬೋಧನೆ ಮಾಡಲು ತಿಳಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿದ ಮಳೆಗೆ 30ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾಂಪೌಂಡ್‌ ಗೋಡೆಗಳಿಗೆ ಹಾನಿ ಆಗಿರುದೆ. ದಾಸ್ತಾನು ಕೊಠಡಿಗೆ ಹಾನಿಯಾಗಿವೆ. ಮಳೆಗಿಂತ ಮುಂಚೆಯೇ ಕೆಲವು ಶಾಲೆಗಳಲ್ಲಿ ಕೊಠಡಿಗಳು ಬಿರುಕು ಬಿಟ್ಟಿದ್ದು, ಮಳೆಯ ನಂತರ ಮತ್ತಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಕೆಲವು ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದು, ದುರಸ್ತಿ ಕಾಣದ ಕೊಠಡಿಗಳಿಂದ ಇಕ್ಕಟ್ಟಾದ ಕೊಠಡಿಯಲ್ಲಿಯೇ ಹೆಚ್ಚಿನ ಮಕ್ಕಳು ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ಕೆಲವು ಶಾಲೆಗಳಲ್ಲಿ ಹತ್ತು ವರ್ಷಗಳ ಹಿಂದಷ್ಟೇ ನಿರ್ಮಾಣಗೊಂಡಿರುವ ಕೊಠಡಿಗಳೂ ಸೋರುತ್ತಿರುವುದು, ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಂತಿದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಕೊಠಡಿಗಳಿಗೆ ಹಾನಿ ಆಗಿದ್ದರೆ, ಅಂತಹ ಕಡೆಗಳಲ್ಲಿ ಮಕ್ಕಳನ್ನು ಕೂರಿಸಬಾರದು. ಪರ್ಯಾಯ ವ್ಯವಸ್ಥೆ ಅಥವಾ ಬದಲಿ ಕೊಠಡಿಯಲ್ಲಿ ಪಾಠ ನಡೆಸಬೇಕು. ಮಳೆ ಹಾನಿಯ ಬಗ್ಗೆ ವರದಿ ನೀಡಬೇಕು. ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಮಳೆಯ ಪ್ರಮಾಣ ಹೆಚ್ಚಾದರೆ, ಗೋಡೆಗಳು ಶಿಥಿಲಗೊಂಡಿವೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕುʼ ಎಂದು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ADVERTISEMENT

‘ತಾಲ್ಲೂಕಿನ 38 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಕೊಠಡಿ, ಕಾಂಪೌಂಡ್‌ ಗೋಡೆ, ಬಿಸಿಯೂಟ ತಯಾರಿಕಾ ಕೊಠಡಿಗಳಿಗೆ ಮಳೆಯಿಂದ ಹಾನಿಯಾಗಿದೆ ಎಂಬ ವರದಿ ಬಂದಿದೆ. ಅಂತಹ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ಕೊಠಡಿಗಳು ಕುಸಿದು ಬಿದ್ದಿರುವ ಘಟನೆಗಳು ನಡೆದಿಲ್ಲ. ಆದರೆ, ಕೆಲವು ಕೊಠಡಿಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಂತಹ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದೇ ಬದಲಿ ಕೊಠಡಿ ಬಳಸುವಂತೆ ಸೂಚಿಸಲಾಗಿದೆ. ಮಳೆಯ ನಂತರ ಅನುದಾನದ ಲಭ್ಯತೆ ಮೇರೆಗೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದುʼ ಎಂದು ಪಂಚಾಯತ್‌ ರಾಜ ಇಲಾಖೆಯ ಎಂಜಿನಿಯರ್‌ ಪ್ರದೀಪ ಭಟ್ಟ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.