ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ₹ 400 ಕೋಟಿ ಮಂಜೂರು

ಹಲವು ಕುಗ್ರಾಮಗಳಿಗೂ ಮೂಲಸೌಕರ್ಯ ನೀಡಲು ಆದ್ಯತೆ: ರೂಪಾಲಿ ನಾಯ್ಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
ರೂಪಾಲಿ ನಾಯ್ಕ
ರೂಪಾಲಿ ನಾಯ್ಕ   

ಕಾರವಾರ: ‘ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆಈವರೆಗೆ ಸುಮಾರು ₹ 400 ಕೋಟಿ ಮಂಜೂರಾಗಿದೆ. ಹಿಂದಿನ ಶಾಸಕರು ಕಡೆಗಣಿಸಿದ್ದ ಹಲವು ಭಾಗಗಳಲ್ಲಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಮಂಜೂರಾದ ಹಣ ಹಾಗೂ ಅವುಗಳ ಪ್ರಗತಿಯ ಕುರಿತು ಮಾಹಿತಿ ನೀಡಿದರು.

‘ಕ್ಷೇತ್ರದ ಹಾಲಕ್ಕಿ ಒಕ್ಕಲಿಗರ ಅಭ್ಯುದಯಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅವರ ಕಲೆ, ಬದುಕಿನ ಕುರಿತು ಪರಿಚಯಿಸಲು ಅಂಕೋಲಾದಲ್ಲಿ ವಸ್ತು ಸಂಗ್ರಹಾಲಯ ಆರಂಭಿಸಲಾಗುವುದು. ಅದರೊಂದಿಗೇ ಸಭಾಭವನವನ್ನೂ ನಿರ್ಮಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ₹ 3 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದರು.

ADVERTISEMENT

ವೈಲವಾಡ ಗ್ರಾಮದ ಖಾರ್ಗೆಜೂಗ ಸ್ಮಶಾನ ರಸ್ತೆ ನಿರ್ಮಾಣಕ್ಕೆ ₹ 1 ಕೋಟಿ, ಅಂಬ್ರಾಯಿ– ಉಳಗಾ ರಸ್ತೆಯ ಕಾತ್ನಿಧೋಲ್ ರಸ್ತೆಗೆ ₹ 2 ಕೋಟಿ ನಿಗದಿಯಾಗಿದೆ.ಕಾರವಾರದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆಮೊದಲನೇ ಹಂತದಲ್ಲಿ ₹ 10 ಕೋಟಿ ಹಾಗೂ ಎರಡನೇ ಹಂತದಲ್ಲಿ ₹ 10 ಕೋಟಿ ಮಂಜೂರಿಗೆಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರಿ ನೌಕರರಿಗೆ 40 ವಸತಿಗೃಹಗಳು, ಕಾಳಿಮಾತಾ ದೇವಾಲಯ ಜೆಟ್ಟಿ ನಿರ್ಮಾಣಕ್ಕೆ ₹ 3 ಕೋಟಿ, ಕೋಡಿಬಾಗ ಜೆಟ್ಟಿ ನಿರ್ಮಾಣಕ್ಕೆ ₹ 2 ಕೋಟಿ ಮಂಜೂರಾಗಲಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಮದಳ್ಳಿ ಬಾಳೆರಾಶಿ ಕಾಲುಸಂಕ ನಿರ್ಮಾಣಕ್ಕೆ ₹ 30 ಲಕ್ಷ, ಒಕ್ಕಲಗೇರಿಯಿಂದ ಅಂಬಗೋಣ ರಸ್ತೆಗೆ ₹ 50 ಲಕ್ಷ, ಕೈಗಡಿ ರಸ್ತೆ ನಿರ್ಮಾಣಕ್ಕೆ ₹ 85 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸೀಬರ್ಡ್ ನೌಕಾನೆಲೆ ಮತ್ತು ಕಾರವಾರ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ₹ 106 ಕೋಟಿ ಮಂಜೂರಾಗಿದೆ. ಅಂಕೋಲಾ ತಾಲ್ಲೂಕಿನ 25 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ₹ 36 ಕೋಟಿ ಮಂಜೂರಿಯ ಹಂತದಲ್ಲಿದೆ. ಕಾರವಾರ ತಾಲ್ಲೂಕಿನ 12 ಗ್ರಾಮಗಳಿಗೆ ಕದ್ರಾ ಅಣೆಕಟ್ಟೆಯ ಹಿನ್ನೀರನ್ನು ಸರಬರಾಜು ಮಾಡುವ ಯೋಜನೆಗೆ ₹ 10 ಕೋಟಿ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ಸೇತುವೆಗೆ ₹ 17 ಕೋಟಿ:ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ₹ 100 ಕೋಟಿ ಮಂಜೂರಾಗಿದೆ. ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮದ ರಾಮನಗುಳಿ– ಕಲ್ಲೇಶ್ವರ ಸೇತುವೆ ನಿರ್ಮಾಣಕ್ಕೆ ₹ 17 ಕೋಟಿ ಮಂಜೂರಾಗಿದೆ. ಇಲ್ಲಿನ ತೂಗುಸೇತುವೆಯು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಬಿದ್ರಳ್ಳಿ– ಸುಂಕಸಾಳ ನಡುವೆ ತೂಗುಸೇತುವೆ ನಿರ್ಮಾಣಕ್ಕೆ ₹ 1 ಕೋಟಿ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ ನಾಯ್ಕ, ಭಾಸ್ಕರ ನಾರ್ವೇಕರ್, ಗಣಪತಿ ಉಳ್ವೇಕರ್, ಅರುಣ್ ನಾಡಕರ್ಣಿ, ಮನೋಜ ಭಟ್, ನಾಗೇಶ ಕುರ್ಡೇಕರ್, ರಾಜೇಂದ್ರ ನಾಯಕ, ಸುಭಾಷ್ ಗುನಗಿ, ನಯನಾ ನೀಲಾವರ, ನಗರಸಭೆ ಸದಸ್ಯ ಡಾ.ನಿತಿನ್ ಪಿಕಳೆ, ಜಿಲ್ಲಾ ಪಂಚಾಯ್ತಿ ಸದಸ್ಯ ಜಗದೀಶ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.