ADVERTISEMENT

415 ರೌಡಿಗಳ ಪರೇಡ್

`ಗೂಂಡಾ ಕಾಯ್ದೆ; 11ಮಂದಿ ಗಡಿಪಾರಿಗೆ ವರದಿ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 8:24 IST
Last Updated 24 ಏಪ್ರಿಲ್ 2013, 8:24 IST

ಕಾರವಾರ: `ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಗೂಂಡಾ ಕಾಯ್ದೆಯಡಿ ಭಟ್ಕಳದ ಒಬ್ಬನನ್ನು ಗಡಿಪಾರು ಮಾಡಲಾಗಿದ್ದು, 11 ಮಂದಿ ಗಡಿಪಾರಿಗೆ ವರದಿ ಸಲ್ಲಿಸಲಾಗಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ತಿಳಿಸಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ  ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಜಿಲ್ಲೆಯಲ್ಲಿರುವ 415 ರೌಡಿಗಳು ಹಾಗೂ 241 ಕೋಮು ಗೂಂಡಾಗಳನ್ನು ಠಾಣೆಗಳಿಗೆ ಕರೆಯಿಸಿ ರೌಡಿ ಪರೇಡ್ ನಡೆಸಲಾಗಿದೆ' ಎಂದರು.

`ಅಪರಾಧ ಹಿನ್ನೆಲೆಯುಳ್ಳ 131 ಮಂದಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದ್ದು, ಅನುಮಾಸ್ಪದ ಕೆಲವು ವ್ಯಕ್ತಿಗಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ' ಎಂದು ಅವರು ತಿಳಿಸಿದರು.

`ಮತದಾನದ ವೇಳೆ ಶಾಂತಿ ಕಾಪಾಡಲು ಆರು ಎಸ್‌ಪಿ, 6ಡಿಎಸ್‌ಪಿ, 22 ಸಿಪಿಐ, 49ಪಿಎಸ್‌ಐ, 87ಎಎಸ್‌ಐ, ಸುಮಾರು ಒಂದು ಸಾವಿರ ಸಿವಿಲ್ ಪೊಲೀಸ್, 2600 ಅರೆಸೇನಾ ಪಡೆ, ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸೇರಿದಂತೆ ಸುಮಾರು 3600 ಸಿಬ್ಬಂದಿ ಚುನಾವಣೆ ವೇಳೆ ಕಾರ್ಯನಿರ್ವಹಿಸಲಿದ್ದಾರೆ' ಎಂದು ಹೇಳಿದರು.

`ಹೊರ ರಾಜ್ಯಗಳಿಂದ ಅಕ್ರಮ ಮದ್ಯ, ಹಣ ಮತ್ತು ಉಡುಗೊರೆಗಳು ಬರುವುದನ್ನು ತಡೆಯಲು ಜಿಲ್ಲೆಯಲ್ಲಿ ಒಟ್ಟು 32 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿಯೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸಮುದ್ರದ ಮೂಲಕ ಬರುವ ಅಕ್ರಮ ವಸ್ತುಗಳು ಜಿಲ್ಲೆಗೆ ಬರುವುದನ್ನು ಪತ್ತೆ ಹಚ್ಚಲು ಕೋಸ್ಟ್ ಗಾರ್ಡ್ ಸಹಯೋಗದೊಂದಿಗೆ ಸಮುದ್ರದಲ್ಲಿ ನಾಲ್ಕು ಸಂಚಾರ ದಳಗಳು ಕಾರ್ಯನಿರ್ವಹಿಸುತ್ತಿವೆ' ಎಂದು ಬಾಲಕೃಷ್ಣ ಮಾಹಿತಿ ನೀಡಿದರು.

`ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಜಿಲ್ಲೆಯಲ್ಲಿ ಇದುವರೆಗೆ 31ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಾದ್ಯಂತ ರೂ. 23 ಲಕ್ಷ ನಗದು, 1464 ಲೀಟರ್ ಅಕ್ರಮ ಮದ್ಯ, ಮತ್ತು ಸುಮಾರು  ರೂ. 20ಲಕ್ಷ ಬೆಲೆಯ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದರು.

`ಚುನಾವಣಾ ಆಯೋಗದ ಮಾರ್ಗದರ್ಶನದ ಪ್ರಕಾರ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಂಚೆ ಮತ ಮೂಲಕ ಮತದಾನ ಮಾಡಲು ಕ್ರಮ ಕೈಗೊಳ್ಳಲಾಗಿದೆ' ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಗುಡಿಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.