ಕಾರವಾರ: ಕಳೆದ ಆರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಿಯಮ ಮೀರಿ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದ 4,338 ಜನರ ಕಾರ್ಡ್ ರದ್ದುಪಡಿಸಲಾಗಿದೆ. ಅವುಗಳ ಪೈಕಿ 228 ಸರ್ಕಾರಿ ನೌಕರರೂ ಸೇರಿದ್ದಾರೆ.
‘ಸರ್ಕಾರಿ ನೌಕರಿಯಲ್ಲಿರುವವರು, ಮೂರು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದವರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಸರ್ಕಾರ ನಿಗದಿಪಡಿಸಿದ ಮಾನದಂಡ ಹೊಂದಿಲ್ಲದವರು ಬಡತನ ರೇಖೆಗಿಂತ ಕೆಳಗಿನವರು (ಬಿಪಿಎಲ್) ಎಂದು ಘೋಷಿಸಿಕೊಂಡು ಪಡಿತರ ಚೀಟಿ ಪಡೆಯುವಂತಿಲ್ಲ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.
‘2019 ರಿಂದ ಇದುವರೆಗೆ 228 ಸರ್ಕಾರಿ ನೌಕರರು, ನಿಗದಿಗಿಂತ ಹೆಚ್ಚಿನ ಆದಾಯ ಹೊಂದಿರುವ 379 ಮಂದಿ, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ 97 ಮಂದಿ, ಆದಾಯ ತೆರಿಗೆ ಪಾವತಿಸುವ 1,170 ಮಂದಿ ಮತ್ತು ಇತರ 2,216 ಮಂದಿಯ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಅಂತಹವರಿಂದ ₹46,29,100 ದಂಡ ಸಂಗ್ರಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಸಾರ್ವಜನಿಕರಿಗೆ ಪಡಿತರ ವಿತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಿನಲ್ಲಿ ಶೇ 90.34ರಷ್ಟು ಜನರಿಗೆ ಪಡಿತರ ವಿತರಿಸವ ಮೂಲಕ ಈ ಸಾಧನೆ ಮಾಡಲಾಗಿದೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿನ 410 ನ್ಯಾಯಬೆಲೆ ಅಂಗಡಿಗಳ ಮೂಲಕ 3,08,351 ಪಡಿತರ ಚೀಟಿಗಳ ಪೈಕಿ 2,78,578 ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡಲಾಗಿದೆ. 53,094 ಕ್ವಿಂಟಲ್‌ನಷ್ಟು ಪಡಿತರವನ್ನು ವಿತರಿಸಲಾಗಿದೆ. ಅವುಗಳ ಪೈಕಿ ಭಟ್ಕಳದಲ್ಲಿ 6,063.7 ಕ್ವಿಂ., ಕುಮಟಾದಲ್ಲಿ 6,183.9 ಕ್ವಿಂ, ಶಿರಸಿಯಲ್ಲಿ 5,995.91 ಕ್ವಿಂಟಲ್ ಪಡಿತರ ವಿತರಣೆ ಮಾಡಲಾಗಿದ್ದು, ಮೊದಲ ಮೂರು ಸ್ಥಾನಗಳಲ್ಲಿವೆ’ ಎಂದೂ ತಿಳಿಸಿದ್ದಾರೆ.
ನಿಯಮ ಬಾಹಿರವಾಗಿ ಪಡಿತರ ಚೀಟಿ ಹೊಂದಿದ್ದರೆ ಅಂತಹ ಚೀಟಿ ಪತ್ತೆ ಹಚ್ಚಿ ರದ್ದುಪಡಿಸುವ ಪ್ರಕ್ರಿಯೆ ನಿರಂತರವಾಗಿದೆ.ಮಂಜುನಾಥ ರೇವಣಕರ್, ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.