ADVERTISEMENT

6ನೇ ಕಾರವಾರ ಸಾಹಿತ್ಯ ಸಮ್ಮೇಳನ ಫೆ.17ಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 8:47 IST
Last Updated 23 ಜನವರಿ 2018, 8:47 IST
ಕಾರವಾರದಲ್ಲಿ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಸೋಮವಾರ ನಗರದ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿದರು
ಕಾರವಾರದಲ್ಲಿ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಸೋಮವಾರ ನಗರದ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿದರು   

ಕಾರವಾರ: 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.17 ರಂದು ನಡೆಸಲು ಸೋಮವಾರ ಇಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಭೆಯಲ್ಲಿ ಚರ್ಚಿಸಿದರು.

ಸಮ್ಮೇಳನದ ಸಿದ್ಧತೆ ಕುರಿತು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದರು. ‘ಕಳೆದ ವರ್ಷಕ್ಕಿಂತ ಈ ಬಾರಿ ವಿಭಿನ್ನವಾಗಿ ಹಾಗೂ ನಾಡು ನುಡಿಗೆ ಬಲ ಬರುವಂತೆ ಸಮ್ಮೇಳನವನ್ನು ಆಯೋಜಿಸಬೇಕು. ಸಭೆಗೆ ನಾನಾ ಕಾರಣಗಳಿಂದ ಗೈರು ಹಾಜರಾದವರು ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ಪತ್ರ ಬರೆದು ಸಮ್ಮೇಳನಾಧ್ಯಕ್ಷರ ಹೆಸರು ಸೂಚಿಸಬಹುದು. ಜತೆಗೆ ಆಯೋಜನೆಯ ಕುರಿತಂತೆ ಸೂಕ್ತ ಸಲಹೆಗಳನ್ನು ನೀಡಬಹುದು’ ಎಂದರು.

ನಿಕಟಪೂರ್ವ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ‘ಕನ್ನಡ ನಾಡು ನುಡಿಯ ಏಳ್ಗೆಗಾಗಿ ಎಲೆ ಮರೆಯ ಕಾಯಿಯಂತೆ ದುಡಿದವರು ತಾಲ್ಲೂಕಿನಲ್ಲಿ ಅನೇಕರಿದ್ದಾರೆ. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿದ್ದು, ಸಾಹಿತ್ಯ ರಚನೆ ಹೊರತು ಪಡಿಸಿ ಕನ್ನಡ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರನ್ನು ಕೂಡ ಸಮ್ಮೇಳನದ ಅಧ್ಯಕ್ಷತೆಗೆ ಪರಿಗಣಿಸಬೇಕು. ಸಮ್ಮೇಳವನ್ನು ಕಳೆದ ಬಾರಿ ಗ್ರಾಮಾಂತರ ಭಾಗದಲ್ಲಿ ಮಾಡಲಾಗಿತ್ತು. ಈ ವರ್ಷ ನಗರ ಪ್ರದೇಶದಲ್ಲಿ ಆಯೋಜಿಸೋಣ’ ಎಂದರು.

ADVERTISEMENT

ಸಮ್ಮೇಳನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯ, ಕಾರವಾರದ ಇತಿಹಾಸ ಹಾಗೂ ಇಲ್ಲಿ ಕನ್ನಡಕ್ಕಾಗಿ ದುಡಿದವರು ಹಾಗೂ ಕನ್ನಡ ನಡೆದು ಬಂದ ದಾರಿಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ರಂಗಾಯಣದವರಿಂದ ನಾಟಕ ಅಥವಾ ಜಿಲ್ಲೆಯ ಹವ್ಯಾಸಿ ರಂಗಭೂಮಿಯವರಿಂದ ನಾಟಕ ಪ್ರದರ್ಶಿಸಲು ಕೂಡ ಚರ್ಚೆ ನಡೆಯಿತು.

ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದ ಹೆಸರುಗಳು: ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪಿ.ಎಂ.ತಾಂಡೇಲ, ಎಂ.ಖಲೀಲುಲ್ಲಾ, ಜಿ.ಡಿ.ಪಾಲೇಕರ್, ಚೇತನ್‌ಕುಮಾರ್ ನಾಯ್ಕ, ಮಂಜೂರ್ ಫಾಹೀಂ, ಮಾರುತಿ ಬಾಡಕರ್, ಮಹಾಬಲೇಶ್ವರ ಸೈಲ್, ಎಸ್.ಡಿ.ನಾಯ್ಕರ ಹೆಸರುಗಳನ್ನು ಸದಸ್ಯರು ಸೂಚಿಸಿದರು.

‘ನಿಯಮಾನುಸಾರ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದ ಸಮಿತಿ ಸಮ್ಮೇಳನದ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಿದೆ’ ಎಂದು ನಾಗಾರಾಜ ಹರಪನಹಳ್ಳಿ ತಿಳಿಸಿದರು.

ಶಾಸಕರ ಆಪ್ತ ಕಾರ್ಯದರ್ಶಿ ನಾಗೇಶ್ ತೆಂಡೂಲ್ಕರ್, ಕಸಾಪ ಸದಸ್ಯರಾದ ದೀಪಕ್‌ಕುಮಾರ್ ಶೇಣ್ವಿ, ದೀಪಕ್ ಶೆಟ್ಟಿ, ಖೈರುನ್ನೀಸಾ ಶೇಖ್, ನಜೀರ್ ಅಹಮ್ಮದ್ ಶೇಖ್, ಬಾಬು ಶೇಖ್, ಮಂಜು ಕಡತೋಕ, ದರ್ಶನ ನಾಯ್ಕ, ಗಿರೀಶ್ ನಾಯ್ಕ ಭಾಗವಹಿಸಿದ್ದರು.

* * 

ಸಮ್ಮೇಳನದಲ್ಲಿ ಭಾಷೆಗೆ ಒತ್ತು ನೀಡುವ ಮೂಲಕ ಜನರ ಸಮಸ್ಯೆಗಳನ್ನು ಕೂಡ ಚರ್ಚಿಸಬೇಕು. ಅದು ಸರ್ಕಾರದ ಗಮನ ಸೆಳೆಯುವಂತಿರಬೇಕು ನಾಗರಾಜ ಹರಪನಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.