ADVERTISEMENT

‘ನ್ಯಾಯಕ್ಕಾಗಿ ಪತ್ರಿಕೆ ಬಳಕೆಯಾಗಲಿ’

ಪತ್ರಿಕಾ ಭವನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:38 IST
Last Updated 26 ಜನವರಿ 2018, 11:38 IST
ಕಾರವಾರದ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಾಣ ಮಾಡಲಾಗಿರುವ ಪತ್ರಿಕಾ ಭವನದ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಅನಾವರಣ ಮಾಡಿದರು
ಕಾರವಾರದ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಾಣ ಮಾಡಲಾಗಿರುವ ಪತ್ರಿಕಾ ಭವನದ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಅನಾವರಣ ಮಾಡಿದರು   

ಕಾರವಾರ: ಪ್ರಜಾಪ್ರಭುತ್ವದಲ್ಲಿ ಪತ್ರಿಕೆ ಅಸ್ತ್ರವಿದ್ದಂತೆ. ಸಮಾಜದ ಕಲ್ಯಾಣಕ್ಕೆ ಅದರ ಉಪಯೋಗ ಆಗಬೇಕು. ಅದರ ಮೂಲಕ ಸಾಮಾಜಿಕ ನ್ಯಾಯ ಕೊಡುವ ಕಾರ್ಯ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಪತ್ರಿಕಾ ಭವನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವ್ಯಕ್ತಿಯ ಮುಖ, ಜಾತಿ ನೋಡಿ ಸುದ್ದಿಗಳನ್ನು ಬರೆಯುವ ಮತ್ತು ಬರೆಯಿಸುವ ಪ್ರವೃತ್ತಿ ಸರಿಯಲ್ಲ. ದಶಕಗಳ ಕಾಲದ ನನ್ನ ರಾಜಕೀಯ ಜೀವನದಲ್ಲಿ ನಾನೂ ಅಂತಹ ಕೆಲಸವನ್ನು ಎಂದೂ ಮಾಡಿಲ್ಲ. ಸತ್ಯಕ್ಕೆ ದೂರವಾದ ವಿಚಾರವನ್ನು ಬಿಂಬಿಸಿದರೆ ಪ್ರಜಾಪ್ರಭುತ್ವಕ್ಕೆ ತೊಂದರೆಯಾಗುತ್ತದೆ. ಆ ಮೂಲಕ ಪತ್ರಿಕೆಗಳ ಮೇಲಿರುವ ಜನರ ವಿಶ್ವಾಸ ದೂರವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

ಯಾವುದೇ ಸಾಧಕನಾಗಲೀ ಒಂದು ಹಂತಕ್ಕೆ ಬರಲು ಸಾಕಷ್ಟು ಪರಿಶ್ರಮವಿರುತ್ತದೆ. ಆದರೆ, ಅದನ್ನು ಟಿಆರ್‌ಪಿಗಾಗಿ ಬಲಿ ಕೊಡಬಾರದು. ಇಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ. ಈ ಮೂಲಕ ಸಮಾಜ ಕಟ್ಟುವ ಕಾರ್ಯವಾಗಬೇಕು, ಪ್ರಜಾಪ್ರಭುತ್ವ ಬಲಪಡಿಸುವ ಕೆಲಸವಾಗಿ ಎಂದು ಆಶಿಸಿದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ‘ಪತ್ರಿಕಾ ಭವನಕ್ಕೆ ಇಂತಹ ಸುಂದರ ಸ್ಥಳ ಇಡೀ ರಾಜ್ಯದಲ್ಲೇ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಕಟ್ಟಡದಲ್ಲಿ ಅಗತ್ಯವಾಗಿ ಆಗಬೇಕಿರುವ ಕಾರ್ಯಗಳಿಗೆ ಇನ್ನೂ ₹ 5  ಲಕ್ಷ ಅನುದಾನ ನೀಡಲು ಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಘಟಕದ ಅಧ್ಯಕ್ಷ ಕಡತೋಕಾ ಮಂಜು ಅವರೂ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.