ADVERTISEMENT

ಉತ್ತರ ಕನ್ನಡ: 3 ವರ್ಷದಲ್ಲಿ 55 ಬಾಲ ಗರ್ಭಿಣಿಯರು ಪತ್ತೆ

ಗಣಪತಿ ಹೆಗಡೆ
Published 3 ಏಪ್ರಿಲ್ 2025, 6:54 IST
Last Updated 3 ಏಪ್ರಿಲ್ 2025, 6:54 IST
   

ಕಾರವಾರ: ಜಿಲ್ಲೆಯಲ್ಲಿ ಈಚಿನ ವರ್ಷದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭವತಿಯಾಗುತ್ತಿರುವ ಸಂಗತಿ ಬೆಳಕಿಗೆ ಬರತೊಡಗಿದ್ದು, ಪಾಲಕರ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ದಾಖಲಾದ ಪ್ರಕರಣಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 55 ಬಾಲೆಯರು ಗರ್ಭಿಣಿಯಾಗಿರುವುದು ವರದಿಯಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಮೂರು ವರ್ಷದಲ್ಲಿ ಇಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.

ಬಾಲ ಗರ್ಭಿಣಿಯರು ಪತ್ತೆಯಾದ ಪ್ರಕರಣಗಳ ಪೈಕಿ ಕೆಲವಷ್ಟಕ್ಕೆ ಮಾತ್ರ ಬಾಲ್ಯ ವಿವಾಹ ಕಾರಣವಾದರೆ, ಬಹುತೇಕವು ಪ್ರೇಮ ಪ್ರಕರಣಗಳಿಗೆ ತಳಕು ಹಾಕಿಕೊಂಡಿವೆ. 

ADVERTISEMENT

‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭವತಿಯಾದ ಪ್ರಕರಣಗಳು ಪತ್ತೆಯಾದಲ್ಲಿ ಪಾಲಕರು ಅಥವಾ ಅಂಗನವಾಡಿ ಕಾರ್ಯಕರ್ತೆಯರ ದೂರು ಆಧರಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಕೆಲವು ಸ್ವಯಂಪ್ರೇರಿತ ಪ್ರಕರಣಗಳೂ ದಾಖಲಾಗಿವೆ’ ಎನ್ನುತ್ತಾರೆ ಅಧಿಕಾರಿಗಳು.

‘ಲೈಂಗಿಕ ಕಿರುಕುಳ, ದೌರ್ಜನ್ಯ ನಡೆದರೆ ದೂರು ನೀಡುವಂತೆ ಶಾಲೆ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಲಾಗುತ್ತಿದೆ. ಮಕ್ಕಳ ದೂರು ಸಹಾಯವಾಣಿ 1098 ಕುರಿತು ಮಾಹಿತಿ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿದೆ. ಅದರ ಪರಿಣಾಮವಾಗಿ ಈಚಿನ ವರ್ಷದಲ್ಲಿ ಬಾಲ ಗರ್ಭಿಣಿಯರ ಕುರಿತ ದೂರುಗಳು ಹೆಚ್ಚು ಸಲ್ಲಿಕೆಯಾಗಿವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದರು.

‘ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಹದಿಹರೆಯದಲ್ಲಿ ಬಾಲಕಿಯರು ದಾರಿ ತಪ್ಪುತ್ತಿರುವ ಘಟನೆಗಳು ನಡೆಯುತ್ತಿವೆ. ಪ್ರೇಮ ಪ್ರಕರಣ, ಲೈಂಗಿಕ ದೌರ್ಜನ್ಯದಿಂದ ಗರ್ಭವತಿಯಾದವರಿದ್ದಾರೆ. ಆಪ್ತ ಸಮಾಲೋಚನೆಗೆ ಒಳಪಡಿಸಿದ ಬಳಿಕ ಈ ವಿಚಾರಗಳನ್ನು ಬಹಿರಂಗಪಡಿಸುತ್ತಿದ್ದಾರೆ’ ಎಂದರು.

‘ಬಾಲಕಿಯರಲ್ಲಿ ಜಾಗೃತಿ ಮೂಡಿಸಲು ಬಾಲಕಿಯರು ಹೆಚ್ಚಿರುವ ಸ್ಥಳಗಳಲ್ಲಿ ಮಕ್ಕಳ ಹಕ್ಕು ರಕ್ಷಣಾ ಸಮಿತಿ ರಚಿಸಲಾಗಿದೆ. ಸಮಿತಿಯು ಕಾಲಕಾಲಕ್ಕೆ ಸಭೆ ನಡೆಸಿ ಸಮಸ್ಯೆ ಆಲಿಸಿ, ವರದಿ ನೀಡುತ್ತದೆ. ತೊಂದರೆಗಳಿದ್ದವರನ್ನು ಆಪ್ತ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಲಾಗುತ್ತಿದೆ’ ಎಂದು ವಿವರಿಸಿದರು.

‘20 ವರ್ಷಕ್ಕಿಂತ ಮುಂಚೆ ಹೆಣ್ಣು ಮಕ್ಕಳಲ್ಲಿ ಗರ್ಭಕೋಶ, ಪ್ರಸವದ ದಾರಿ ಸರಿಯಾದ ಬೆಳವಣಿಗೆ ಇರದು. ಅಪ್ರಾಪ್ತರು ಗರ್ಭಿಣಿಯರಾದರೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದು ಹೆಚ್ಚು. ಹೀಗಾಗಿ ಮಕ್ಕಳ ಆರೈಕೆ, ಕಾಳಜಿ ಬಗ್ಗೆ ಪಾಲಕರು ಮುತುವರ್ಜಿ ವಹಿಸಬೇಕು’ ಎನ್ನುತ್ತಾರೆ ಸ್ತ್ರೀರೋಗ ತಜ್ಞರೂ ಆಗಿರುವ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್.

ಬಾಲ ಗರ್ಭಿಣಿಯರಿಗೆ ಚಿಕಿತ್ಸೆ ಒದಗಿಸಲು, ಆರೈಕೆ ಮಾಡಲು ಬಾಲಕಿಯರ ಬಾಲ ಮಂದಿರದಲ್ಲಿ ಆರೈಕೆ ಕೇಂದ್ರವಿದೆ. ಅಪ್ರಾಪ್ತ ವಯಸ್ಸಿನಲ್ಲಿ ದಾರಿ ತಪ್ಪದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ
ಸೋನಲ್ ಐಗಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.