ADVERTISEMENT

ಮರಾಠಾ ಸಮಾಜ ಬಿಜೆಪಿ ಬೆಂಬಲಿಸುವ ಹೇಳಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 8:33 IST
Last Updated 30 ಜನವರಿ 2018, 8:33 IST

ಹಳಿಯಾಳ: ಕರ್ನಾಟಕ ಕ್ಷತ್ರೀಯ ಮರಾಠಾ ಸಮಾಜದವರಿಗೆ ಬಿಜೆಪಿಗೆ ಮತ ನೀಡಿ ಅಧಿಕಾರಕ್ಕೆ ತರುವಂತೆ ಸಂದೇಶ ನೀಡಲಾಗಿದೆ ಎಂದು ಕರ್ನಾಟಕ ಕ್ಷತ್ರೀಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ ಗಾಯಕವಾಡ ಹೇಳಿಕೆ ನೀಡಿರುವುದನ್ನು ಮರಾಠಾ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಮರಾಠಾ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಹೇಳಿದರು.

ಭಾನುವಾರ ಮರಾಠಾ ಭವನದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಸಮಾಜದ ಒಗ್ಗಟ್ಟನ್ನು ಮುರಿಯಲು ಕೆಲವು ಪಟ್ಟಭದ್ರ ಹಿತಾಸಕ್ತಿಯ ಮುಖಂಡರು ಈ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಮರಾಠಾ ಸಮಾಜದವರು ಎಲ್ಲ ಪಕ್ಷದಲ್ಲಿ ಇದ್ದು ಯಾವುದೇ ಪಕ್ಷಕ್ಕೆ ಸೀಮಿತವಾಗದೇ ಮುಖ್ಯ ಉದ್ದೇಶ 2ಬಿ ಗೆ ಸೇರಿಸಿ ಮರಾಠಾ ಸಮಾಜವನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ತರುವುದಕ್ಕೋಸ್ಕರ ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದೇವೆ.

ಮರಾಠಾ ಸಮಾಜವನ್ನು ಬಿಜೆಪಿ ಬೆಂಬಲಿತ ಎಂದು ಒಕ್ಕೂಟದ ಅಧ್ಯಕ್ಷ ಶಿರಸಿಯಲ್ಲಿ ಹೇಳಿಕೆಯನ್ನು ನೀಡುವಾಗ ಜಿಲ್ಲೆಯಲ್ಲಿಯ ಯಾವುದೇ ಮರಾಠಿಗರರನ್ನು ಸಂರ್ಪಕಿಸದೇ ಹೇಳಿಕೆಯನ್ನು ನೀಡಿರುತ್ತಾರೆ. ಇನ್ನು ಮುಂದೆ ಇಂತಹ ಹೇಳಿಕೆಯನ್ನು ನೀಡುವ ಮೊದಲು ಯೋಚನೆ ಮಾಡಬೇಕು. ಮರಾಠಾ ಸಮಾಜದವರು ಸ್ವಾಭಿಮಾನದಿಂದ ಇದ್ದಾರೆ. ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದು ಅವರ ವೈಯಕ್ತಿಕ ವಿಚಾರ ಹೊರತು ಯಾವುದೇ ಮುಖಂಡರು ಅವರನ್ನು ಇಂತಹದೇ ಪಕ್ಷದರವರೆಂದು ಸಂಬೋಧಿಸುವಂತಿಲ್ಲ. ಇದರಿಂದ ಮುಂದೆ ಹೇಳಿಕೆ ನೀಡಿದವರು ಕೆಟ್ಟ ಪರಿಣಾಮ ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮಂಗಲಾ ಕಶೀಲ್ಕರ ಮಾತನಾಡಿ, ‘ಶಿರಸಿಯಲ್ಲಿ ರಾಜ್ಯ ಒಕ್ಕೂಟದ ಅಧ್ಯಕ್ಷರು ಮರಾಠಾ ಮೀಸಲಾತಿಗಾಗಿ ಒತ್ತಾಯಪಡಿಸಿ ಶಾಸಕ ಕಾಗೇರಿಯವರಿಗೆ ಮನವಿ ಸಲ್ಲಿಸಿರುತ್ತಾರೆಯೇ ಹೊರತು ತಾವು ಬಿಜೆಪಿಗೆ ಬೆಂಬಲ ನೀಡುತ್ತೇವೆಂದು ಹೇಳಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಉಡಚಪ್ಪಾ ಬೋಬಾಟಿ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ವಜ್ರೇಶ್ವರಿ ಶೆಟವಣ್ಣವರ, ಎಲ್.ಎಸ್. ಅರಶೀಣಗೇರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣಾ ಪಾಟೀಲ, ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಎಂ.ಎಸ್. ತೋರಸ್ಕರ, ಭಾರತಿ ಬಿರ್ಜೆ, ಬಿ.ಡಿ. ಚೌಗುಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.