ADVERTISEMENT

‘ಜಾತಿ- ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 8:53 IST
Last Updated 5 ಫೆಬ್ರುವರಿ 2018, 8:53 IST

ಹೊನ್ನಾವರ: ‘ಧರ್ಮದ ಆಧಾರದಲ್ಲಿ ದೇಶ ಕಟ್ಟಲು ಹೊರಟ ವ್ಯಕ್ತಿಗಳು ಅಂಧಃಪತನ ಕಂಡ ಇತಿಹಾಸದ ಪುಟಗಳಿಂದ ಪಾಠ ಕಲಿತು, ಪರಸ್ಪರ ಸ್ನೇಹ– ಸಹಕಾರದೊಂದಿಗೆ ಸಮಾಜದಲ್ಲಿ ಬದುಕಬೇಕು’ ಎಂದು ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು. ಮುಗ್ವಾದ ನಾಮಧಾರಿ ಅಭಿವೃದ್ದಿ ಸಂಘ ಆರೊಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

‘ಜಾತಿ– ಧರ್ಮದ ಹೆಸರಲ್ಲಿ ಮುನುಷ್ಯರ ನಡುವೆ ಗೋಡೆ ಕಟ್ಟುವುದರಿಂದ ದೇಶ ಕಟ್ಟಲಾಗುವುದಿಲ್ಲ. ಇಡೀ ಜಗತ್ತೇ ನನ್ನ ಕುಟುಂಬವೆಂದು ಸನಾತನ ಭಾರತೀಯ ಸಂಸ್ಕೃತಿ ಪ್ರತಿಪಾದಿಸಿದೆ. ಎಲ್ಲ ಜಾತಿ, ಜನಾಂಗದವರ ಪ್ರೀತಿ ಹಾಗೂ ವಿಶ್ವಾಸ ಗಳಿಸಿ ಸಮಾಜದ ಸಮಷ್ಠಿ ಹಿತವನ್ನು ಸಾಧಿಸಬೇಕು. ಮುಗ್ವಾ ನಾಮಧಾರಿ ಅಭಿವೃದ್ಧಿ ಸಂಘ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಅವರು ಶ್ಲಾಘಿಸಿದರು.

ಶಾಸಕ ಮಂಕಾಳ ಎಸ್.ವೈದ್ಯ, ‘ಸಂಘವು ನಾಮಧಾರಿಗಳ ಜತೆಗೆ ಇತರ ಸಮಾಜದವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಾಣ, ಶಿಕ್ಷಣ, ಆರೋಗ್ಯಕ್ಕೆ ನೆರವು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಇತರರಿಗೆ ಮಾದರಿ’ ಎಂದು ಪ್ರಶಂಸಿಸಿದರು. ಶಾಸಕಿ ಶಾರದಾ ಶೆಟ್ಟಿ, ‘ಸಂಘದ ಸಮಾಜಮುಖಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಉದ್ಯಮಿಗಳಾದ ಮಂಜುನಾಥ ಎಲ್.ನಾಯ್ಕ, ವೆಂಕಟ್ರಮಣ ಹೆಗಡೆ, ಬಿಜೆಪಿ ಮುಖಂಡರಾದ ಜೆ.ಡಿ.ನಾಯ್ಕ, ಸೂರಜ್ ನಾಯ್ಕ ಸೋನಿ, ಹಿರಿಯ ವಕೀಲ ಆರ್.ಎಸ್. ಕಾಮತ್, ತಾಲ್ಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ನಾಗರಾಜ ನಾಯಕ ತೊರ್ಕೆ, ಫಾದರ್ ಗಾರ್ಬಿಯಲ್ ಲೋಪಿಸ್ ಮಾತನಾಡಿದರು.

ಸಂಘದ ಕಾರ್ಯದಲ್ಲಿ ಸಹಕರಿಸಿದ ಉದ್ಯಮಿ ಕಾಂತಪ್ಪ ಶಾನಭಾಗ ಅವರನ್ನು ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ ಎನ್.ಎಂ. ನಾಯ್ಕ ಸ್ವಾಗತಿಸಿದರು.ಶಿಕ್ಷಕ ಸುಬ್ರಹ್ಮಣ್ಯ ನಾಯ್ಕ ನಿರೂಪಿಸಿದರು.ಗಣೇಶ ನಾಯ್ಕ ವಂದಿಸಿದರು. ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ, ಮುಖಂಡರಾದ ಎಂ.ಜಿ. ನಾಯ್ಕ, ಚಂದ್ರಶೇಖರ ಗೌಡ, ವಾಮನ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ ಶೆಟ್ಟಿ, ಗಿರಿಜಾ ಎನ್.ನಾಯ್ಕ, ಸ್ಥಳದಾನಿ ಸೀತಾರಾಮ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.