ADVERTISEMENT

ಬನವಾಸಿಗೆ ನೀರು ಒದಗಿಸಲು ₹7 ಕೋಟಿ ಯೋಜನೆ- ಸಚಿವ ಶಿವರಾಮ ಹೆಬ್ಬಾರ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 12:00 IST
Last Updated 17 ಜನವರಿ 2022, 12:00 IST
ಶಿರಸಿ ತಾಲ್ಲೂಕಿನ ಬನವಾಸಿಯ ನಾಡಕಚೇರಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೋಮವಾರ ಉದ್ಘಾಟಿಸಿದು
ಶಿರಸಿ ತಾಲ್ಲೂಕಿನ ಬನವಾಸಿಯ ನಾಡಕಚೇರಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೋಮವಾರ ಉದ್ಘಾಟಿಸಿದು   

ಶಿರಸಿ: ಜಲಜೀವನ ಮಿಷನ್ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದ್ದು, ಒಂದೂವರೆ ತಿಂಗಳೊಳಗೆ ಮೊದಲ ಹಂತದ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ತಾಲ್ಲೂಕಿನ ಬನವಾಸಿ ಹಾಗೂ ಭಾಶಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಒಟ್ಟೂ ₹465 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿದೆ. ಮೊದಲ ಹಂತದಲ್ಲಿ 356 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿತ್ತು. ಈ ಪೈಕಿ 191 ಕಾಮಗಾರಿ ಪೂರ್ಣಗೊಂಡಿದೆ’ ಎಂದರು.

‘ಎರಡನೇ ಹಂತದಲ್ಲಿ 206 ಕೋಟಿ ವೆಚ್ಚದಲ್ಲಿ 245 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಬನವಾಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಒದಗಿಸಲು ₹7 ಕೋಟಿ ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದರು.

ADVERTISEMENT

‘ತಿಗಣಿ ಗ್ರಾಮದಲ್ಲಿ ₹4 ಕೋಟಿ ವೆಚ್ಚದಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಗೊಳ್ಳಲಿದೆ. ಬನವಾಸಿ, ದಾಸನಕೊಪ್ಪ ಮತ್ತು ಮಳಗಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಶೀಘ್ರವೇ ಅನುಷ್ಠಾನಕ್ಕೆ ಬರಲಿವೆ’ ಎಂದರು.

ಶಿರಸಿಯ ರೋಟರಿ ಕ್ಲಬ್‍ನ ‘ಹ್ಯಾಪಿ ಸ್ಕೂಲ್’ ಯೋಜನೆಗೆ ಬನವಾಸಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಚಾಲನೆ ನೀಡಿದರು.

ಬನವಾಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತುಳಸಿ ಆರೇರ, ಸದಸ್ಯರು, ಎ.ಪಿ.ಎಂ.ಸಿ. ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡರ್, ತಹಶೀಲ್ದಾರ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಇಓ ದೇವರಾಜ ಹೊತ್ತಲಕೊಪ್ಪ, ಪಿಡಿಓ ಪರಶುರಾಮ, ದ್ಯಾಮಣ್ಣ ದೊಡ್ಮನಿ, ರೋಟರಿ ಕ್ಲಬ್ ಅಧ್ಯಕ್ಷ ಪಾಂಡುರಂಗ ಪೈ, ಡಾ.ದಿನೇಶ ಹೆಗಡೆ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.