ADVERTISEMENT

ಉತ್ತರ ಕನ್ನಡ ಜಿಲ್ಲೆ: ಎಪಿಎಂಸಿಯಲ್ಲಿ ಖಾಲಿ ಹುದ್ದೆಗಳೇ ಅಧಿಕ

ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಯ ಎಪಿಎಂಸಿಗಳು

ಸಂಧ್ಯಾ ಹೆಗಡೆ
Published 22 ಮೇ 2019, 19:48 IST
Last Updated 22 ಮೇ 2019, 19:48 IST
ಶಿರಸಿ ಎಪಿಎಂಸಿ ಕಚೇರಿ
ಶಿರಸಿ ಎಪಿಎಂಸಿ ಕಚೇರಿ   

ಶಿರಸಿ: ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಎಪಿಎಂಸಿಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಭರ್ತಿಯಾಗಿರುವ ಹುದ್ದೆಗಳಿಗಿಂತ ಖಾಲಿ ಹುದ್ದೆಗಳೇ ಅಧಿಕವಾಗಿರುವುದು ಇ– ಟೆಂಡರ್ ವ್ಯವಸ್ಥೆಗೆ ಹಿನ್ನಡೆಯಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು ಎಂಟು ತಾಲ್ಲೂಕುಗಳಲ್ಲಿ ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮಂಜೂರು ಇರುವ ಒಟ್ಟು 108 ಹುದ್ದೆಗಳಲ್ಲಿ 86 ಹುದ್ದೆಗಳು ಖಾಲಿಯಿವೆ. ದೊಡ್ಡ ಅಡಿಕೆ ಮಾರುಕಟ್ಟೆ ಹೊಂದಿರುವ ಹಾಗೂ ಇ–ಟೆಂಡರ್ ವ್ಯವಸ್ಥೆಗೆ ಮಾದರಿಯಾಗಿ ರಾಜ್ಯದ ಗಮನ ಸೆಳೆದಿರುವ ಶಿರಸಿ ಹಾಗೂ ಜಿಲ್ಲಾ ಕೇಂದ್ರವಾದ ಕಾರವಾರ ಎಪಿಎಂಸಿಗಳಲ್ಲಿ ಕಾರ್ಯದರ್ಶಿ ಹುದ್ದೆಗಳೇ ಖಾಲಿ ಉಳಿದಿವೆ.

‘ಸಿಬ್ಬಂದಿ ಕೊರತೆಯ ಕಾರಣಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಲೆಕ್ಕಪತ್ರ ವಿಭಾಗದವರೇ ಹೆಚ್ಚು ಭಾಗವಹಿಸುತ್ತಾರೆ. ಈ ಭಾಗದಲ್ಲಿ ಸಹಕಾರಿ ವ್ಯವಸ್ಥೆ ಬಲವಾಗಿರುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಎಪಿಎಂಸಿ ಮೇಲಿನ ಭಾರ ಕೊಂಚ ಕಡಿಮೆಯಿದೆ. ಆದರೆ, ಹಮಾಲಿ ಕಾರ್ಮಿಕರಿಗೆ ಲೈಸನ್ಸ್ ನೀಡುವ, ರೈತರಿಂದ ತೆರಿಗೆ ಸಂಗ್ರಹಿಸುವ ಕೆಲಸ ಎಪಿಎಂಸಿಯಿಂದಲೇ ನಡೆಯುತ್ತದೆ. ಈ ಎಲ್ಲ ಕಾರ್ಯ ಸಕಾಲದಲ್ಲಿ ನಡೆಯಲು ಸಿಬ್ಬಂದಿ ಇದ್ದರೆ ಅನುಕೂಲ’ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಎಲ್ಲ ಹುದ್ದೆಗಳು ಖಾಲಿ:

ಶಿರಸಿಯಲ್ಲಿರುವ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಸಹಾಯಕ ನಿರ್ದೇಶಕ ಸೇರಿದಂತೆ ಎಲ್ಲ ಏಳು ಹುದ್ದೆಗಳು ಖಾಲಿ ಇವೆ.

‘ರಾಜ್ಯದ ಪ್ರತಿಷ್ಠಿತ ಎಪಿಎಂಸಿಗಳಲ್ಲಿ ಶಿರಸಿ ಒಂದು. ಇ–ಟೆಂಡರಿಂಗ್ ವ್ಯವಸ್ಥಿತವಾಗಿ ನಡೆಯುವುದನ್ನು ಹೊರ ರಾಜ್ಯಗಳ ಅಧಿಕಾರಿಗಳು, ಜನಪ್ರತಿನಿಧಿಗಳ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದೆ. ಸಿಬ್ಬಂದಿ ಕೊರತೆಯಿಂದ ಇರುವವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ರೈತ ಸಂಜೀವಿನಿ ಮೊದಲಾದ ಕೃಷಿಕರಿಗೆ ತಲುಪಿಸುವ ಕಾರ್ಯಕ್ರಮಗಳ ಅನುಷ್ಠಾನ ಸ್ವಲ್ಪ ವಿಳಂಬವಾಗುತ್ತಿದೆ’ ಎಂದು ಶಿರಸಿ ಎಪಿಎಂಸಿ ಅಧ್ಯಕ್ಷ ಸುನೀಲ್ ನಾಯ್ಕ ಪ್ರತಿಕ್ರಿಯಿಸಿದರು.

ಅಧಿಕಾರವಹಿಸಿಕೊಂಡಾಗಿನಿಂದ ಬೇರೆ ಬೇರೆ ಚುನಾವಣೆಗಳು, ನೀತಿ ಸಂಹಿತೆ ಇರುವ ಕಾರಣ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಖಾಲಿ ಹುದ್ದೆ ಭರ್ತಿ ಮಾಡುವಂತೆ ವಿನಂತಿಸಲಾಗಿದೆ. ಶಿರಸಿ ಎಪಿಎಂಸಿಯಲ್ಲಿ ಕಾರ್ಯದರ್ಶಿ, ಸಹಕಾರ್ಯದರ್ಶಿ, ಅಧೀಕ್ಷಕ ಹುದ್ದೆಗಳು, ಗ್ರೂಪ್ ‘ಡಿ’ ಹುದ್ದೆ ಸಹ ಖಾಲಿ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕು;ಮಂಜೂರು ಇರುವ ಹುದ್ದೆ;ಖಾಲಿ ಇರುವ ಹುದ್ದೆ

ಶಿರಸಿ;33;26

ಸಿದ್ದಾಪುರ;15;10

ಯಲ್ಲಾಪುರ;14;10

ಹಳಿಯಾಳ;14;08

ಮುಂಡಗೋಡ;08;06

ಕುಮಟಾ;17;11

ಹೊನ್ನಾವರ;13;09

ಕಾರವಾರ;08;06

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.