ADVERTISEMENT

ದುಶ್ಚಟಗಳಿಂದ ದೂರವಿದ್ದರೆ ಸಮಾಜ ಕ್ಷೇಮ: ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ

ವ್ಯಸನ ಮುಕ್ತ ದಿನಾಚರಣೆ: ಮಹಾಂತ ಶಿವಯೋಗಿಗೆ ಗೌರವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:26 IST
Last Updated 2 ಆಗಸ್ಟ್ 2025, 6:26 IST
ಕಾರವಾರದಲ್ಲಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿದರು.
ಕಾರವಾರದಲ್ಲಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿದರು.   

ಕಾರವಾರ: ‘ಮಾದಕ ದ್ರವ್ಯಗಳ ಸೇವನೆಯಂತೆ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯೂ ಕೆಟ್ಟ ವ್ಯಸನವಾಗಿದೆ. ಯುವ ಜನತೆ ಇವುಗಳಿಂದ ದೂರ ಇದ್ದರೆ ಸಮಾಜಕ್ಕೆ ಕ್ಷೇಮ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾಂತ ಶಿವಯೋಗಿ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಮಾಧ್ಯಮಗಳಲ್ಲೇ ಕಾಲ ಕಳೆಯುತ್ತ ಒಬ್ಬಂಟಿತನ ಅನುಭವಿಸುವುದನ್ನು ಬಿಟ್ಟು ಹೊರಬನ್ನಿ, ಪಾಲಕರು, ಸುತ್ತಲಿನ ಸಮುದಾಯದೊಂದಿಗೆ ಬೆರೆತು ವ್ಯಕ್ತಿತ್ವ ರೂಪಿಸಿಕೊಳ್ಳಿ. ದುಶ್ಚಟಗಳ ವಿರುದ್ಧ ಜಾಗೃತಿಗೆ ಜೋಳಿಗೆ ಹಿಡಿದು ಭಿಕ್ಷೆ ಬೇಡುತ್ತಿದ್ದ ಶಿವಯೋಗಿ ಸ್ವಾಮೀಜಿ ಅವರಂತಹ ಸಾಧಕರ ಸಂದೇಶಗಳನ್ನು ಪಾಲಿಸಿ’ ಎಂದರು.

ADVERTISEMENT

ಉಪನ್ಯಾಸ ನೀಡಿದ ಕ್ರಿಮ್ಸ್ ಮನೋ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಅಕ್ಷಯ ಪಾಟಕ್, ‘ವ್ಯಸನವು ಕೇವಲ ದೈಹಿಕವಾದ ಚಟವಲ್ಲ ಅದು ಮೆದುಳಿನ ಕಾಯಿಲೆಯಾಗಿದೆ. ವಿದ್ಯಾರ್ಥಿಗಳು ಕುತೂಹಲ ಮತ್ತು ಮನರಂಜನೆಗೆ ಎಂದು ಪ್ರಾರಂಭಿಸುವ ದುಶ್ಚಟಗಳು ಮುಂದೆ ವ್ಯಸನವಾಗಿ ಮಾರ್ಪಾಡಾಗುತ್ತವೆ’ ಎಂದು ತಿಳಿಸಿದರು.

ನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರವೀಂದ್ರ ಬಿರಾದರ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರಮೇಶ ಪತ್ರೆಕರ ಅಧ್ಯಕ್ಷತೆ ವಹಿಸಿದ್ದರು. ವ್ಯಸನ ಮುಕ್ತರಾಗಿ ಉತ್ತಮ ಜೀವನ ನಡೆಸುತ್ತಿರುವ ವ್ಯಸನ ಮುಕ್ತರನ್ನು ಸನ್ಮಾನಿಸಲಾಯಿತು. 

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸತೀಶ ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್, ಇತರರು ಇದ್ದರು. ವನಿತಾ ಶೇಟ್ ನಿರೂಪಿಸಿದರು, ಉಪನ್ಯಾಸಕಿ ಪೂಜಾ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.