ಶಿರಸಿ: ಮುರೇಗಾರ ಜಲಪಾತದ ನೀರಿನಲ್ಲಿ ಸಿಲುಕಿ ಅಪಾಯದಲ್ಲಿದ್ದ ಮೂವರನ್ನು ರಕ್ಷಿಸಿದ್ದ ಹುಬ್ಬಳ್ಳಿಯ ಆದಿತ್ಯ ಮಲ್ಲಿಕಾರ್ಜುನ ಶಿವಳ್ಳಿ ಅವರಿಗೆ ಪೊಲೀಸ್ ಇಲಾಖೆ ಶುಕ್ರವಾರ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.
ಸಂಕ್ರಾಂತಿಯಂದು ತಾಲ್ಲೂಕಿನ ಮುರೇಗಾರ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಹುಬ್ಬಳ್ಳಿಯ ಇಂದುಧರ ಮುತ್ತಳ್ಳಿ, ಅಕ್ಷರ ಮುತ್ತಳ್ಳಿ ಹಾಗೂ ಬಳ್ಳಾರಿಯ ಬಸಪ್ಪ ಕೊಡಬಾಳ ಅವರು ಈಜಲು ಇಳಿದಾಗ ತೀವ್ರ ಅಪಾಯದಲ್ಲಿ ಸಿಲುಕಿ, ಸಾವು–ಬದುಕಿನ ನಡುವೆ ಹೋರಾಡುತ್ತಿದ್ದರು. ಇದನ್ನು ಗಮನಿಸಿದ ಯುವಕ ಆದಿತ್ಯ, ಈ ಮೂವರನ್ನು ನೀರಿನ ಸೆಳೆತದಿಂದ ಹೊರ ತಂದು ಅವರ ಜೀವ ಉಳಿಸಿದ್ದಾರೆ.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಯುವಕನ ಸಾಹಸವನ್ನು ಮೆಚ್ಚಿದ್ದಾರೆ. ಅವರ ಸೂಚನೆಯಂತೆ ಗ್ರಾಮೀಣ ಠಾಣೆ ಪಿಎಸ್‌ಐ ನಂಜಾ ನಾಯ್ಕ, ಆದಿತ್ಯ ಅವರಿಗೆ ಪ್ರಶಂಸಾ ಪತ್ರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.