ADVERTISEMENT

ಎಲ್ಲ ಹವಾಮಾನಕ್ಕೂ ಸಲ್ಲುವ ಸಿರಿಧಾನ್ಯ ‘ಟೆಫ್’

ಮಲೆನಾಡಿನಿಂದ ಬಯಲು ನಾಡಿಗೆ ವಿಸ್ತರಣೆಯಾದ ಸಿರಿಧಾನ್ಯ

ಸಂಧ್ಯಾ ಹೆಗಡೆ
Published 18 ಮಾರ್ಚ್ 2020, 19:37 IST
Last Updated 18 ಮಾರ್ಚ್ 2020, 19:37 IST
ಶಿರಸಿ ತಾಲ್ಲೂಕಿನ ನರೇಬೈಲ್‌ನಲ್ಲಿ ರೈತ ರಾಮಚಂದ್ರ ಆರ್ಯರ್ ಟೆಫ್ ಬೆಳೆಸಿರುವುದು
ಶಿರಸಿ ತಾಲ್ಲೂಕಿನ ನರೇಬೈಲ್‌ನಲ್ಲಿ ರೈತ ರಾಮಚಂದ್ರ ಆರ್ಯರ್ ಟೆಫ್ ಬೆಳೆಸಿರುವುದು   

ಶಿರಸಿ: ರಾಜ್ಯದ ವಿವಿಧ ಜಿಲ್ಲೆಗಳ ರೈತರ ಹೊಲದಲ್ಲಿ ಸಿರಿಧಾನ್ಯ ‘ಟೆಫ್’ ಬೆಳೆಸಿರುವ ಕೃಷಿ ವಿಜ್ಞಾನ ಕೇಂದ್ರವು, ಇಥಿಯೋಪಿಯಾ ಮೂಲದ ಬೆಳೆಯನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಬೆಳೆಯಬಹುದು ಎಂಬುದನ್ನು ಸಾಬೀತು ಮಾಡಿದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 50 ಎಕರೆ, ಹಾವೇರಿ, ರಾಯಚೂರು, ಕಲಬುರ್ಗಿ ಜಿಲ್ಲೆ ಸೇರಿ ಒಟ್ಟು 50 ಎಕರೆಯಲ್ಲಿ ‘ಟೆಫ್’ ಬೆಳೆಯ ಪ್ರಾಯೋಗಿಕ ಕೃಷಿ ನಡೆಸಲಾಗಿದೆ.

‘2018ರಲ್ಲಿ ಮೊದಲ ಬಾರಿಗೆ ಶಿರಸಿ ತಾಲ್ಲೂಕು ಬನವಾಸಿಯ ಹನುಮಂತಪ್ಪ ಮಡ್ಲೂರ ಅವರ ಹೊಲದಲ್ಲಿ, ಒಂದು ಗುಂಟೆಯಲ್ಲಿ ಟೆಫ್ ಬೆಳೆದು ನಾಲ್ಕು ಕೆ.ಜಿ ಬೀಜ ಉತ್ಪಾದನೆ ಮಾಡಲಾಗಿತ್ತು. ಅದೇ ಬೀಜವನ್ನು ಹಲವು ರೈತರಿಗೆ ವಿತರಿಸಿದ್ದೆವು. ಕಳೆದ ವರ್ಷ ಎಂಟಕ್ಕೂ ಹೆಚ್ಚು ರೈತರು ಗುಂಟೆಯೊಂದರಲ್ಲಿ ಸರಾಸರಿ 28 ಕೆ.ಜಿ ಇಳುವರಿ ಪಡೆದಿದ್ದರು. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೆಫ್‌ಗೆ ₹ 500 ದರ ಲಭಿಸಿತ್ತು’ ಎಂದು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಿವಶಂಕರಮೂರ್ತಿ ಹೇಳಿದರು.

ADVERTISEMENT

‘ಕಡಿಮೆ ನಿರ್ವಹಣೆ, ಅತ್ಯಲ್ಪ ನೀರು ಬಯಸುವ ಈ ಬೆಳೆ ಎಲ್ಲ ಹವಾಮಾನದಲ್ಲೂ ಉತ್ತಮ ಇಳುವರಿ ನೀಡುತ್ತದೆ. ಉತ್ತರ ಕನ್ನಡಕ್ಕೆ ಹೋಲಿಸಿದರೆ, ರಾಯಚೂರಿನಲ್ಲಿ ಇಳುವರಿ ಪ್ರಮಾಣ ಕೊಂಚ ಕಡಿಮೆಯಿದೆ. ಬೇಸಾಯದ ಬಗೆ, ಬೀಜದ ಪ್ರಮಾಣ, ಬಿತ್ತನೆ, ನಾಟಿ ಮೊದಲಾದ 10 ಮಾದರಿಯ ಪ್ರಯೋಗವನ್ನು ಕೃಷಿ ಇಲಾಖೆಯ ‘ಆತ್ಮ’ ಯೋಜನೆ ಮೂಲಕ ನರೇಬೈಲ್‌ನಲ್ಲಿ ನಡೆಸಲಾಗಿದೆ. ಸಾಲು ಬಿತ್ತನೆಯಲ್ಲಿ ಹೆಚ್ಚು ಫಸಲು ದೊರೆತಿದೆ’ ಎಂದು ತಿಳಿಸಿದರು.

ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿಶೇಷ ಆಸಕ್ತಿವಹಿಸಿ, ಟೆಫ್ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಪ್ರಯೋಗ ನಡೆಸುತ್ತಿದ್ದಾರೆ ಎಂದರು.

‘ಕಳೆದ ವರ್ಷ 10 ಗ್ರಾಂ ಬೀಜ ಬಿತ್ತನೆ ಮಾಡಿ, ಮೂರು ಗುಂಟೆಯಲ್ಲಿ 84 ಕೆ.ಜಿ ಇಳುವರಿ ಪಡೆದಿದ್ದೆ. ಸೆಗಣಿ ಗೊಬ್ಬರ, ಜೀವಾಮೃತ, ಕೂಲಿ ಸೇರಿ ₹ 10 ಸಾವಿರ ವೆಚ್ಚವಾಗಿತ್ತು. ಈ ಬಾರಿ 50 ಗ್ರಾಂ ಬೀಜವನ್ನು ಅರ್ಧ ಎಕರೆಗೆ ಬಿತ್ತನೆ ಮಾಡಿದ್ದು, 2 ಕ್ವಿಂಟಲ್ ಇಳುವರಿಯ ನಿರೀಕ್ಷೆಯಿದೆ. ಬೇಸಿಗೆಯಲ್ಲಿ ಜೋಳ ಬೆಳೆಸುವ ಗದ್ದೆಯಲ್ಲಿ ಟೆಫ್ ಬೆಳೆಸಿದ್ದೇನೆ. ಹೊಸ ಬೆಳೆಯಾಗಿದ್ದರಿಂದ ಮೊದಲ ವರ್ಷ ನಾಟಿ, ಸಂಸ್ಕರಣೆ ಎಲ್ಲವೂ ತುಸು ಕಷ್ಟವಾಯಿತು. ಈಗ ಕಾರ್ಮಿಕರೂ ಈ ಕೆಲಸಕ್ಕೆ ಹೊಂದಿಕೊಂಡಿದ್ದಾರೆ’ ಎಂದು ಬೆಳೆಗಾರ ನರೇಬೈಲ್‌ನ ರಾಮಚಂದ್ರ ಆರ್ಯರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.