ADVERTISEMENT

ವಿರೋಧ ಪಕ್ಷದ ಶಾಸಕರಿರುವಲ್ಲಿ ಪರಿಶಿಷ್ಟರು ಇಲ್ಲವೇ ?

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆ, ರಾಜ್ಯ ಸರ್ಕಾರದ ನಿಲುವಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 11:40 IST
Last Updated 3 ಡಿಸೆಂಬರ್ 2018, 11:40 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ‌‘ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಪರಿಶಿಷ್ಟ ಜಾತಿ–ಪಂಗಡದ ಕಾಲೊನಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಹಾಗಾದರೆ, ವಿರೋಧ ಪಕ್ಷದ ಶಾಸಕರು ಇರುವಲ್ಲಿ ಪರಿಶಿಷ್ಟ ಜಾತಿ–ಪಂಗಡದವರು ಇಲ್ಲವೇ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಖಾರವಾಗಿ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತ ಪಕ್ಷದ ಶಾಸಕರು ಇರುವ ಕ್ಷೇತ್ರಕ್ಕೆ ಸರಾಸರಿ ₹ 1.5 ಕೋಟಿಯಷ್ಟು ಅನುದಾನ ದೊರೆತಿದೆ. ಬಿಜೆಪಿ ಶಾಸಕರಿರುವ 104 ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡದೇ, ರಾಜ್ಯದ ಅರ್ಧಕ್ಕಿಂತ ಹೆಚ್ಚು ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದೆ. ಈ ವಿಷಯವನ್ನು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದರು.

’ಅಸ್ತಿತ್ವಕ್ಕೆ ಬಂದ ಆರು ತಿಂಗಳುಗಳಲ್ಲೇ ಸಮ್ಮಿಶ್ರ ಸರ್ಕಾರ, ಜನರ ವಿಶ್ವಾಸ ಕಳೆದುಕೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಧಾರ್ಮಿಕ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವ ವಿಷಯದಲ್ಲಿಯೂ ತಾರತಮ್ಯವಾಗಿದೆ. ಕೇವಲ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹಣ ಬಿಡುಗಡೆಯಾಗಿದೆ. ಸರ್ಕಾರದ ಇಂತಹ ಧೋರಣೆ ಖಂಡನೀಯ. ಉಳಿದ ಇಲಾಖೆಗಳ ಅನುದಾನ ಬಿಡುಗಡೆಯಲ್ಲೂ ಇಂತಹ ಪ್ರಮಾದವಾಗುವ ಸಾಧ್ಯತೆಗಳಿವೆ. ಬಿಜೆಪಿ ಹೆಸರು ಕೆಡಿಸಲು ಆಡಳಿತ ಪಕ್ಷಗಳು ಷಡ್ಯಂತ್ರ ನಡೆಸಿವೆ’ ಎಂದು ಆರೋಪಿಸಿದರು.

ADVERTISEMENT

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ, ಅಧ್ಯಕ್ಷ– ಉಪಾಧ್ಯಕ್ಷರ ಮೀಸಲಾತಿ ಗೊಂದಲ ಇತ್ಯರ್ಥಗೊಂಡಿಲ್ಲ. ಇದು ವಿಕೇಂದ್ರೀಕರಣ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲದ ಸರ್ಕಾರದಿಂದ ಸೃಷ್ಟಿಯಾಗಿರುವ ಸಮಸ್ಯೆಯಾಗಿದೆ. ಸಾಲಮನ್ನಾ ಗೊಂದಲ ಮುಂದುವರಿದಿದೆ. ಕಳೆದ ಅವಧಿಯ ಶಾಸಕರ ನಿಧಿಯ ಹಣ ಮಂಜೂರು ಬಾಕಿ ಇದೆ. ಇದರಿಂದ ಬೇಸತ್ತ ಜನರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಶಿರಸಿ ನಗರ ಅಭಿವೃದ್ಧಿ ಸಂಬಂಧ ಸಮಿತಿ ರಚಿಸುವ ಕುರಿತಂತೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಏನಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದರ ನೀಲನಕ್ಷೆ ಸಿದ್ಧಪಡಿಸಲಾಗಿದೆ. ನಗರಸಭೆಯ ಆಡಳಿತ ಸಮಿತಿ ಅಧಿಕಾರಕ್ಕೆ ಬರದಿರುವುದರಿಂದ ಕಾರ್ಯಾನುಷ್ಠಾನಕ್ಕೆ ವಿಳಂಬವಾಗಿದೆ’ ಎಂದರು.

ಪಕ್ಷದ ಪ್ರಮುಖರಾದ ಆರ್.ವಿ.ಹೆಗಡೆ, ಆರ್.ಡಿ.ಹೆಗಡೆ, ಚಂದ್ರು ದೇವಾಡಿಗ, ರಮಾಕಾಂತ ಭಟ್ಟ, ನಂದನ ಸಾಗರ, ಶ್ರೀಕಾಂತ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.